ಸ್ಪೀಕರ್ ಆಗಿ ಕಾಗೋಡು ತಿಮ್ಮಪ್ಪ ಆಯ್ಕೆ

ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಮೂರನೇ ದಿನದ ಅಧಿವೇಶನ ಪ್ರಾರಂಭವಾಯಿತು. ಹಂಗಾಮಿ ಸ್ಪೀಕರ್ ಮಾಲೀಕಯ್ಯ ಗುತ್ತೇದಾರ್, ಸ್ಪೀಕರ್ ಆಯ್ಕೆಯ ಚುನಾವಣೆಯ ನಿರ್ಣಯ ಮಂಡಿಸಿದರು. ನಿರ್ಣಯದೊಂದಿಗೆ ಸ್ಪೀಕರ್ ಆಯ್ಕೆಗೆ ಚಾಲನೆ ದೊರೆಯಿತು. ಸ್ಪೀಕರ್ ಚುನಾವಣೆಗಾಗಿ ಗುರುವಾರವೇ ಕಾಗೋಡು ತಿಮ್ಮಪ್ಪ ನಾಮಪತ್ರ ಸಲ್ಲಿಸಿದ್ದರು.
ಆಡಳಿತ ಪಕ್ಷದ ನಾಯಕ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಕಾಗೋಡು ತಿಮ್ಮಪ್ಪ ಅವರನ್ನು ಸಭಾಧ್ಯಕ್ಷರನ್ನಾಗಿ ಚುನಾಯಿಸುವಂತೆ ಸೂಚಿಸಿದರು. ಸಚಿವರಾದ ಆರ್.ವಿ.ದೇಶಪಾಂಡೆ, ಹಿರಿಯ ಸದಸ್ಯ ಅಪ್ಪಾಜಿ ಎಸ್.ನಾಡಗೌಡ ಈ ನಿರ್ಣಯವನ್ನು ಅನುಮೋದಿಸಿದರು.
ಸ್ಪೀಕರ್ ಸ್ಥಾನಕ್ಕೆ ಬೇರೆ ಯಾರು ನಾಮಪತ್ರ ಸಲ್ಲಿಸಿದ ಕಾರಣ ಕಾಗೋಡು ತಿಮ್ಮಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಹಂಗಾಮಿ ಸ್ಪೀಕರ್ ಮಾಲೀಕಯ್ಯ ಗುತ್ತೇದಾರ್ ಸದನದಲ್ಲಿ ಘೋಷಿಸಿದರು. ಸ್ಪೀಕರ್ ಆಯ್ಕೆಯಿಂದಾಗಿ ಹಂಗಾಮಿ ಸ್ಪೀಕರ್ ಹುದ್ದೆ ರದ್ದಾಯಿತು. ಎಲ್ಲಾ ಪಕ್ಷದ ಶಾಸಕರು ಪಕ್ಷ ಬೇಧ ಮರೆತು ಕಾಗೋಡು ತಿಮ್ಮಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದರು.
ಸ್ಪೀಕರ್ ಆಗಿ ಆಯ್ಕೆಯಾದ ನಂತರ ಕಾಗೋಡು ತಿಮ್ಮಪ್ಪ ತಮ್ಮ ಸ್ಥಾನದಲ್ಲಿ ಕುಳಿತು ಸದನವನ್ನು ಮುಂದುವರೆಸಿದ್ದಾರೆ.












Click it and Unblock the Notifications