ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮತ್ತೊಂದು ಹಿನ್ನಡೆ

ಇತ್ತ ಅದನ್ನು ಕಾರ್ಯರೂಪಕ್ಕೆ ತರಬೇಕಿದ್ದ ಅಧಿಕಾರಿಗಳು ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಎಂದು ಫಜೀತಿಗಿಟ್ಟುಕೊಂಡಿದ್ದಾರೆ. ಮುಖ್ಯಮಂತ್ರಿಗಳ ಸದುದ್ದೇಶದ ಆದೇಶವನ್ನು ಪಾಲಿಸಬೇಕು ಎಂಬ ಸದಾಶಯ ಅಧಿಕಾರಿಗಳಲ್ಲಿದೆ. ಆದರೆ ಅಕ್ಕಿ ಸಿಗುತ್ತಿಲ್ಲವಷ್ಟೆ.
ಹಾಗಾಗಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನಾಳೆಯಿಂದ ಅಂದರೆ ಜೂನ್ ತಿಂಗಳ ಪಡಿತರದಲ್ಲಿ 30 ಕೆಜಿ 'ರೂಪಾಯಿ ಅಕ್ಕಿ' ಸರಬರಾಜು ಆಗುತ್ತಿಲ್ಲ. ಸದ್ಯಕ್ಕೆ ಅದು ಒಂದು ತಿಂಗಳು ಮುಂದೂಡಲ್ಪಟ್ಟಿದೆ.
ಈ ಯೋಜನೆಗಾಗಿ ರಾಜ್ಯಕ್ಕೆ ತಕ್ಷಣಕ್ಕೆ 25 ಲಕ್ಷ ಟನ್ ಅಕ್ಕಿ ಅಗತ್ಯವಿದೆ. ಆದರೆ ಆರಂಭದಲ್ಲಿ ಅಸ್ತು ಅಂದಿದ್ದ ಕೇಂದ್ರ ಸರಕಾರ ಈಗ ಕೈಯೆತ್ತಿದೆ. ಅಕ್ಕಿ ಸರಬರಾಜು ಮಾಡಲು ಸಾಧ್ಯವಿಲ್ಲ ಎಂದಿದೆ. ಹಾಗಾಗಿ ಬಡವರ ಮನೆಗಳಲ್ಲೂ ಅಕ್ಕಿ ಬೇಯಿಸಬೇಕೆಂಬ ಸಿಎಂ ಸಿದ್ದು ಮಹತ್ವಾಕಾಂಕ್ಷಿ ಯೋಜನೆಗೆ ಆರಂಭಿಕ ವಿಘ್ನ ಎದುರಾಗಿದೆ.
ಎಲ್ಲ ರಾಜ್ಯಗಳೂ ಅಗ್ಗದ ಅಕ್ಕಿಗೆ ಬೇಡಿಕೆಯಿಟ್ಟರೆ ಗತಿಯೇನು?:
ಎಲ್ಲ ರಾಜ್ಯಗಳೂ ಇದೇ ರೀತಿ ಅಗ್ಗದ ಅಕ್ಕಿಗೆ ಬೇಡಿಕೆಯಿಟ್ಟರೆ ಎಲ್ಲಿಂದ ಅಷ್ಟೊಂದು ಅಕ್ಕಿ ತರುವುದು ಎಂಬುದು ಕೇಂದ್ರ ಆಹಾರ ಸಚಿವ ಕೆವಿ ಥಾಮಸ್ ಅವರ ಪೀಕಲಾಟ. ಆದ್ದರಿಂದ ಹೆಚ್ಚುವರಿ ಅಕ್ಕಿ ವಿತರಣೆಗೆ ಅವರು ಹಸಿರು ನಿಶಾನೆ ಸೂಚಿಸಿಲ್ಲ.
'ಇಲ್ಲ ಅಕ್ಕಿ ಕೊಡ್ತೀನಿ ಅಂತ ಬಡವರಿಗೆ ಮಾತುಕೊಟ್ಟಾಗಿದೆ. ಈಗ ನಾನು ಮಾತು ತಪ್ಪಲು ಆಗದು. ಏನಾದರೂ ಮಾಡಿ ಅಕ್ಕಿ ತನ್ನಿ' ಎಂದು ಸಿಎಂ ಸಿದ್ದು ಕೊನೆಯ ಘಳಿಗೆಯಲ್ಲಿ ತಮ್ಮ ಅಧಿಕಾರಿಗಳಿಗೆ ಸೂಚಿಸಿದ್ದರು. ಬೇರೆ ಮೂಲಗಳಿಂದ ಅಕ್ಕಿ ಖರೀದಿಸಿ ಅಧಿಕಾರಿಗಳು ಕಾರ್ಯಗತರಾದರು. ಆದರೆ ಸದ್ಯಕ್ಕೆ ಬೇರೆ ಕಡೆಗಳಿಂದಲೂ ಅಕ್ಕಿ ದೊರೆಯದ ಕಾರಣ 'ರೂಪಾಯಿ ಅಕ್ಕಿ' ಯೋಜನೆಯನ್ನು ತಾತ್ಕಾಲಿಕವಾಗಿ ಜುಲೈ ತಿಂಗಳಿಗೆ ಮುಂದೂಡುವ ಸಾಧ್ಯತೆಯಿದೆ.
ಯಾವುದಕ್ಕೂ ಇಂದು ನಡೆಯುವ ಉನ್ನತಾಧಿಕಾರಿಗಳ ಸಭೆಯಲ್ಲಿ ಈ ಕುರಿತಂತೆ ಅಂತಿಮ ತೀರ್ಮಾನ ಹೊರಹೊಮ್ಮುವ ನಿರೀಕ್ಷೆಯಿದೆ. ಅಂದಹಾಗೆ ಮಾರುಕಟ್ಟೆ ದರದಲ್ಲಿ ಈ ಯೋಜನೆ ಜಾರಿಗೊಳಿಸಿಲು ಸರಕಾರಕ್ಕೆ 7000 ಕೋಟಿ ರೂ. ಬೇಕು.












Click it and Unblock the Notifications