ಸದನದ ಸ್ವಾರಸ್ಯಗಳು : ಸಿಎಂ ನಿದ್ದೆ, ಎಚ್ಡಿಕೆ ಗೈರು

ಬೆಳಗ್ಗೆ 11 ಗಂಟಗೆ ಸರಿಯಾಗಿ ಸದನ ಪ್ರಾರಂಭವಾಯಿತು. ಹಂಗಾಮಿ ಸ್ಪೀಕರ್ ಮಾಲಿಕಯ್ಯ ಗುತ್ತೇದಾರ್ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿ ಎಂದು ನಿರ್ಣಯ ಮಂಡಿಸಿದರು. ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಿದರು. ನಂತರ ಎಲ್ಲಾ ಸದಸ್ಯರು ಪ್ರತ್ಯೇಕವಾಗಿ ಸ್ಪೀಕರ್ ಎದುರು ನಿಂತು ಪ್ರಮಾಣ ವಚನ ಸ್ವೀಕರಿಸಿದರು.
ಮರಾಠಿಯಲ್ಲಿ ಪ್ರಮಾಣ : ಖಾನಾಪುರ ಕ್ಷೇತ್ರದ ಎಂಇಎಸ್ ಶಾಸಕ ಅರವಿಂದ್ ಪಾಟೀಲ್ ಮರಾಠಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಕಾನೂನು ಸಚಿವ ಟಿ.ಬಿ.ಜಯಚಂದ್ರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಅವರಿಂದ ವಿರೋಧ ಎದುರಿಸಿದರು. ವಿಧಾನಸೌಧದ ಮೊಗಸಾಲೆಯಲ್ಲಿ ಮಾಧ್ಯಮಗಳಿಗೆ ಮರಾಠಿಯಲ್ಲಿ ಹೇಳಿಕೆ ನೀಡಿ ಕನ್ನಡ ವಿರೋಧಿ ನಿಲುವು ಪ್ರದರ್ಶಿಸಿದರು.
ಸದನದ ಸ್ವಾರಸ್ಯಗಳು
ಕುಮಾರಸ್ವಾಮಿ ಗೈರು : ಮಾಜಿ ಮುಖ್ಯಮಂತ್ರಿ, ರಾಮನಗರ ಕ್ಷೇತ್ರದ ಶಾಸಕ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅಧಿವೇನಕ್ಕೆ ಗೈರು ಹಾಜರಾಗಿ ನಿರಾಸೆ ಮೂಡಿಸಿದರು. ಮೊದಲ ಬಾರಿಗೆ ಅಧಿವೇಶನದಲ್ಲಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಇಂದು ಮುಖಾಮುಖಿ ಆಗುತ್ತಾರೆ ಎಂಬ ನಿರೀಕ್ಷೆ ಹುಸಿಯಾಯಿತು.
ನಿದ್ದೆಗೆ ಜಾರಿದ ಸಿದ್ದು : ಸಮಾರಂಭಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿದ್ದೆಗೆ ಶರಣಾಗುವುದು ನೋಡಿದ್ದೇವೆ. ಆದರೆ, ಮೊದಲ ದಿನದ ಅಧಿವೇನದಲ್ಲಿ ಸಿಎಂ ಸಿದ್ದು ನಿದ್ರೆಗೆ ಜಾರಿದ್ದರು. ಸಿಬ್ಬಂದಿ ಬಂದು ಸಿದ್ದರಾಮಯ್ಯ ಅವರನ್ನು ಎಚ್ಚರಿಸಿ ಸದನದಲ್ಲಿ ಕುಳಿತಿರುವುದನ್ನು ಗಮನಕ್ಕೆ ತಂದರು.
ಸಿದ್ದುಗೆ ಬಿಎಸ್ವೈ ವಿಶ್ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಎಂದಿನ ಗೆಟಪ್ ನಲ್ಲಿ ಸದನಕ್ಕೆ ಆಗಮಿಸಿದ್ದರು. ಸಿಎಂ ಸಿದ್ದರಾಮಯ್ಯ ಯಡಿಯೂರಪ್ಪ ಬಳಿಗೆ ಬಂದು ಕುಶಲೋಪರಿ ವಿಚಾರಿಸಿದರು. ಸಿದ್ದರಾಮಯ್ಯಗೆ ಹಸ್ತಲಾಘವ ನೀಡಿದ ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದರು.
ವಿಧಾನಸೌಧವೂ ನೈಸ್ : ನೈಸ್ ಸಂಸ್ಥೆ ಮುಖ್ಯಸ್ಥ ಮತ್ತು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಅಶೋಕ್ ಖೇಣಿ ಮೊದಲ ಬಾರಿಗೆ ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಂಡರು. ಸಿದ್ದರಾಮಯ್ಯ ಅವರ ಬಳಿ ತೆರಳಿ ಅವರಿಗೆ ಅಭಿನಂದನೆ ಸಲ್ಲಿಸಿದರು.
ಮಿಂಚಿದ ಅಂಬರೀಶ್ : ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸದನಕ್ಕೆ ತಡವಾಗಿ ಆಗಮಿಸಿದ ಅವರು ಸಿದ್ದರಾಮಯ್ಯ ಬಳಿ ಗಹನವಾದ ಚರ್ಚೆಯಲ್ಲಿ ತೊಡಗಿದ್ದರು. ಬಿಜೆಪಿಯ ಶಾಸಕರ ಬಳಿ ಹೋಗಿ ಕುಶಲೋಪರಿ ವಿಚಾರಿಸಿದರು. ಸದನದ ತುಂಬಾ ಓಡಾಡಿದ ಅಂಬರೀಶ್ ಮೊದಲ ದಿನ ಮಿಂಚಿದರು. (ಅಂಬಿಗೆ ವಿಶ್ ಮಾಡಿ)
ಸುರೇಶ್ ಕುಮಾರ್ ಮೇಲೆ ಸಿದ್ದು ಕೈ: ಮಾಜಿ ಸಚಿವ ಸುರೇಶ್ ಕುಮಾರ್ ಅವರನ್ನು ಆತ್ಮೀಯವಾಗಿ ಮಾತನಾಡಿಸಿದ ಸಿಎಂ ಸಿದ್ದರಾಮಯ್ಯ, ಅವರ ಹೆಗಲ ಮೇಲೆ ಕೈ ಹಾಕಿ ಕೆಲಕಾಲ ಸಂಭಾಷಣೆ ನಡೆಸಿದರು.
ಹಸಿರು ಪೇಟದ ಶಾಸಕ : ಕುಡುಚಿ ಕ್ಷೇತ್ರದ ಬಿಎಸ್ಆರ್ ಕಾಂಗ್ರೆಸ್ ಶಾಸಕ ಪಿ.ರಾಜೀವ್ ತಲೆಗೆ ಹಸಿರು ಪೇಟ ಕಟ್ಟಿಕೊಂಡು ವಿಧಾನಸೌಧಕ್ಕೆ ಆಗಮಿಸಿದ್ದರು. ಸದನದ ತುಂಬಾ ಅವರ ಪೇಟ ಶಾಸಕರ ಗಮನ ಸೆಳೆಯಿತು.
ಶೆಟ್ಟರ್ ಮೌನ : ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸದನದಲ್ಲಿ ಮೌನಕ್ಕೆ ಶರಣಾಗಿದ್ದರು. ತಮ್ಮ ಹತ್ತಿರ ಬಂದ ಶಾಸಕರಿಗೆ ಮಾತ್ರ ಹಸ್ತಲಾಘವ ನೀಡುತ್ತಿದ್ದರು. ತಮ್ಮ ಸ್ಥಾನದಲ್ಲಿ ಭದ್ರವಾಗಿ ಕುಳಿತಿದ್ದ ಅವರು, ಅಷ್ಟು ಚಟುವಟಿಕೆಯಿಂದ ಕೂಡಿರಲಿಲ್ಲ.
ಒಟ್ಟಾರೆ ಅಧಿವೇಶನದ ಮೊದಲ ದಿನ ಶಾಸಕರಲ್ಲಿ ಅದಮ್ಯ ಉತ್ಸಾಹ ಕಂಡುಬಂದಿತು. ಹೊಸ ಶಾಸಕರು ಮತ್ತು ಸಚಿವರು ನಾಳೆಯಿಂದ ಸದನದಲ್ಲಿ ಹೇಗೆ ಭಾಗವಹಿಸುತ್ತಾರೆ ಎಂದು ಕಾದು ನೋಡಬೇಕು.












Click it and Unblock the Notifications