ಖಾತೆ ಕ್ಯಾತೆ, ಮಾತು ಬದಲಿಸಿದ ಅಭಯಚಂದ್ರ ಜೈನ್

ಕ್ರೀಡಾ ಖಾತೆ ನೀಡುತ್ತಾರೆ ಎಂದು ನಿರೀಕ್ಷಿಸಿದ್ದೆ. ನನಗೆ ಆ ಖಾತೆಯಲ್ಲಿ ಹೆಚ್ಚಿನ ಆಸಕ್ತಿ ಇದೆ ನಿಜ.ಮೀನುಗಾರಿಕೆ ಖಾತೆ ಬೇಡ ಎಂದು ಜೈನ ಮುನಿಗಳು ಸಲಹೆ ಮಾಡಿದ್ದರು. ಅದರಂತೆ ಖಾತೆ ಬದಲಾವಣೆಗಾಗಿ ಮನವಿ ಮಾಡಿದ್ದೆ. ಸದ್ಯದಲ್ಲೇ ಖಾತೆ ಹಿಂದಿರುಗಿಸುವೆ ಎಂದು ಹೇಳಿದ್ದು ನಿಜ ಎಂದು ಅಭಯ್ ಚಂದ್ರ ಜೈನ್ ಹೇಳಿದರು.
ನಾನು ಅಹಿಂಸೆ ಪ್ರತಿಪಾದನೆ ಮಾಡುವ ಜೈನ ಧರ್ಮಕ್ಕೆ ಸೇರಿದ್ದು, ಮೀನುಗಾರಿಕೆ ಇಲಾಖೆಯೊಂದಿಗಿನ ಕೆಲಸ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತದೆ ಎಂದು ಅಭಯ್ ಚಂದ್ರ ಜೈನ್ ಅವರು ತಿಳಿಸಿದ್ದರು.
ಮೀನುಗಾರಿಕೆ ಖಾತೆ ಬೇಡ ಎಂದು ನನ್ನ ಕುಟುಂಬ ಹಾಗೂ ಸಮುದಾಯದವರು ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಸದ್ಯದಲ್ಲೇ ತಾವು ತಮ್ಮ ಖಾತೆಯನ್ನು ಮುಖ್ಯಮಂತ್ರಿಗಳಿಗೆ ಹಿಂದಿರುಗಿಸುವುದಾಗಿ ಅಭಯ್ ಚಂದ್ರ ಜೈನ್ ಅವರು ಹೇಳಿದ್ದರು.
ಮೂಡುಬಿದಿರೆಯ ಸ್ವರ್ಣಮಂದಿರದಲ್ಲಿ ನಡೆದ 'ಪೌರ ಸನ್ಮಾನ'ವನ್ನು ಸ್ವೀಕರಿಸಿ ಮಾತನಾಡಿದ ಅವರು, ತನಗೆ ನೀಡಿರುವ ಮೀನುಗಾರಿಕೆ ಖಾತೆಯ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ ಕರಾವಳಿಯ ಮೀನುಗಾರಿಕಾ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುದಾನವನ್ನು ಪಡೆದು ಅಭಿವೃದ್ಧಿ ಮಾಡಿದ ನಂತರ ಖಾತೆ ಹಿಂದಿರುಗಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಜತೆ ಮಾತುಕತೆ ನಡೆಸಲಾ ಗುವುದು ಎಂದವರು ತಿಳಿಸಿದ್ದರು.
ಮಾಧ್ಯಮಗಳಲ್ಲಿ ಈ ಸುದ್ದಿ ಬಂದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ಜೈನ್ ಅವರಿಗೆ ಕರೆ ಮಾಡಿ ಒಂದು ಸುತ್ತಿನ ತರಾಟೆ ತೆಗೆದುಕೊಂಡಿದ್ದಾರಂತೆ. ನಂತರ ಖಾತೆ ಬದಲಾವಣೆ ಬೇಡ ಎಂದು ಸಿಎಂ ಸಲಹೆ ನೀಡಿದ್ದಾರೆ ಎಂದು ಮತ್ತೊಮ್ಮೆ ಮಾದ್ಯಮಗಳ ಮುಂದೆ ಬಂದು ಸಚಿವ ಜೈನ್ ಹೇಳಿದ್ದಾರೆ.












Click it and Unblock the Notifications