ಪವರ್ ಕಟ್ ಮೊದಲು ಎಸ್ಎಂಎಸ್ ಬರುತ್ತೆ ನೋಡಿ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಫಾಲ್ಟ್ ಮ್ಯಾನೇಜ್ ಮೆಂಟ್ ಸಿಸ್ಟಮ್ ಯೋಜನೆಯಡಿ ವಿದ್ಯುತ್ ಕಡಿತವನ್ನು ಮೊದಲೇ ತಿಳಿಯಿರಿ ಎಂಬ ಎಸ್ಎಂಎಸ್ ಸೇವೆ ಮೂಲಕ ಪವರ್ ಕಟ್ ಮಾಹಿತಿಯನ್ನು ಗ್ರಾಹಕರಿಗೆ ಹತ್ತು ನಿಮಿಷ ಮೊದಲು ನೀಡಲಿದೆ.
ಈ ಯೋಜನೆಯ ಪ್ರಾಯೋಗಿಕ ಜಾರಿಗಾಗಿ ಈಗಾಗಲೇ ರೂಪುರೇಷೆ ತಯಾರಾಗಿದ್ದು, ಶೀಘ್ರದಲ್ಲೇ ಈ ಸೇವೆ ಬೆಂಗಳೂರಿನಲ್ಲಿ ಪ್ರಾರಂಭವಾಗಲಿದೆ. ಇದರಿಂದಾಗಿ ಮತ್ತಷ್ಟು ಗ್ರಾಹಕ ಸ್ನೇಹಿ ಆಗಲಿರುವ ಬೆಸ್ಕಾಂ, ಇವರು ಯಾವಾಗ ಕರೆಂಟು ತೆಗಿತಾರೋ ಎಂಬ ಜನರ ಹಿಡಿಶಾಪದಿಂದ ಮುಕ್ತವಾಗಲು ಬಯಸುತ್ತಿದೆ.
ಎಸ್ಎಂಎಸ್ ಪಡೆಯುವುದು ಹೇಗೆ : ವಿದ್ಯುತ್ ದರ ಕಡಿತದ ಬಗ್ಗೆ ಬೆಸ್ಕಾಂ ಮಾಹಿತಿ ನೀಡುತ್ತದೆ. ಆದರೆ, ಅದನ್ನು ಪಡೆಯುವುದು ಹೇಗೆ ಎಂದು ನೀವು ಚಿಂತಿಸಬೇಕಾಗಿಲ್ಲ. ಎಸ್ಎಂಎಸ್ ಪಡೆಯಲು ನೀವು ಮೊದಲು ಸಂಸ್ಥೆಯ ವೆಬ್ ಸೈಟ್ www.bescom.orgಗೆ ಭೇಟಿ ನೀಡಬೇಕು.
ವೆಬ್ ಸೈಟ್ ನ ಮುಖಪುಟದಲ್ಲಿರುವ ಫಾಲ್ಟ್ ಮ್ಯಾನೇಜ್ ಮೆಂಟ್ ಸಿಸ್ಟಮ್ ಕ್ಲಿಕ್ ಮಾಡಿ ನಿಮ್ಮ ಹೆಸರು, ಮೊಬೈಲ್ ನಂ, ಮನೆ ವಿಳಾಸ, ಇ ಮೇಲ್ ಐಡಿ, ಆರ್.ಆರ್.ನಂ ಭರ್ತಿಮಾಡಿದರೆ ನೀವು ನಿಮ್ಮ ಬಡಾವಣೆಯಲ್ಲಿ ಯಾವಾಗ ಕರೆಂಟ್ ಕಟ್ ಆಗುತ್ತದೆ ಎಂಬ ಮಾಹಿತಿ ಮೊಬೈಲ್ ಗೆ ಹತ್ತು ನಿಮಿಷಗಳ ಮೊದಲೆ ಬಂದು ಬೀಳುತ್ತದೆ.
ಸಾಮಾಜಿಕ ತಾಣಗಳಲ್ಲೂ ಮಾಹಿತಿ : ಕೇವಲ ಮೊಬೈಲ್ ಮೂಲಕ ಸಂದೇಶ ತಲುಪಿಸುವ ಕೆಲಸವನ್ನು ಬೆಸ್ಕಾಂ ಮಾಡುತ್ತಿಲ್ಲ. ನಿಮ್ಮ ಇ ಮೇಲೆ ಐಡಿಗೆ ವಿದ್ಯುತ್ ಕಡಿತದ ಕುರಿತು ಮಾಹಿತಿ ತಲುಪಿಸಲಿದೆ.
ಇದಕ್ಕಾಗಿ ನೀವು ನಿಮ್ಮ ಮೊಬೈಸ್ ಸಂಖ್ಯೆಯ ಜೊತೆಗೆ ಇ ಮೇಲ್ ವಿಳಾಸವನ್ನು ಬೆಸ್ಕಾಂ ವೆಬ್ ಸೈಟ್ ನಲ್ಲಿ ಭರ್ತಿ ಮಾಡಿರಬೇಕು ಅಷ್ಟೆ. ಬೆಸ್ಕಾಂ ಫೇಸ್ ಬುಕ್ ಪೇಜ್ ನಲ್ಲಿಯೂ ವಿದ್ಯುತ್ ಕಡಿತದ ಮಾಹಿತಿ ನೀಡಲು ನಿರ್ಧರಿಸಿದೆ. ಇವುಗಳು ಜಾರಿಯಾಗಲೂ ಕೆಲವು ದಿನಗಳು ಬೇಕಾಗಲಿದೆ. ಆದರೆ, ಎಸ್ಎಂಎಸ್ ಸೇವೆ ಜೂನ್ ನಿಂದ ಜಾರಿಗೆ ಬರುವ ಸಾಧ್ಯತೆ ಇದೆ.











Click it and Unblock the Notifications