ಗುತ್ತೇದಾರ್ ಹಂಗಾಮಿ ಸ್ಪೀಕರ್ : ಜಯಚಂದ್ರ

ಗುರುವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೇ 29 ಹಾಗೂ 30ರಂದು ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ. ಮೇ 31ರಂದು ಸ್ಪೀಕರ್ ಚುನಾವಣೆ ನಡೆಯಲಿದೆ. ಹಂಗಾಮಿ ಸ್ಪೀಕರ್ ಆಗಿ ಮಾಲೀಕಯ್ಯ ಗುತ್ತೇದಾರ್ ಶಾಸಕರ ಪ್ರಮಾಣ ವಚನ ಹಾಗೂ ಸ್ಪೀಕರ್ ಚುನಾವಣೆ ನಡೆಸಲಿದ್ದಾರೆ ಎಂದು ಹೇಳಿದರು.
ಅತ್ಯುತ್ತಮ ಸಂಸದೀಯ ಪಟು ಮತ್ತು ಸಾಗರ ಕ್ಷೇತ್ರದ ಶಾಸಕ ಕಾಗೋಡು ತಿಮ್ಮಪ್ಪ ಅವರು ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಅಪಾರ ರಾಜಕೀಯ ಅನುಭವ ಹೊಂದಿರುವ ಕಾಗೋಡು ತಿಮ್ಮಪ್ಪ ಸದನವನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೂ. 3ರಂದು ರಾಜ್ಯಪಾಲ ಹೆಚ್.ಆರ್. ಭಾರದ್ವಾಜ್ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜೂನ್ 6 ರಂದು ವಿಶೇಷ ಅಧಿವೇಶನ ಮುಕ್ತಾಯಗೊಳ್ಳಲಿದೆ ಎಂದರು. ನೂತನ ಸರ್ಕಾರ ವಿಧಾನಮಂಡಲ ಅಧಿವೇಶವನ್ನು ಘನತೆಯಿಂದ ನಡೆಸಲಿದೆ ಎಂದು ಹೇಳಿದರು.
60 ದಿನ ಕಲಾಪ : ವರ್ಷಕ್ಕೆ ಕನಿಷ್ಠ 60 ದಿನ ವಿಧಾನಮಂಡಲ ಕಲಾಪ ನಡೆಸಬೇಕು ಎಂಬ ಆಶಯ ಹೊಂದಿದ್ದೇವೆ. ಹಿಂದಿನ ಸರ್ಕಾರ ಸಮರ್ಪಕವಾಗಿ ಕಲಾಪ ನಡೆದಿರಲಿಲ್ಲ. ಕಲಾಪ ಹೆಚ್ಚು ನಡೆದಷ್ಟು ಆಡಳಿತ ವ್ಯವಸ್ಥೆ ಚುರುಕಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ವಾರ್ಷಿಕವಾಗಿ ಆರವತ್ತುದಿನ ಅಧಿವೇಶನ ನಡೆವುದಾಗಿ ಹೇಳಿದರು.
ಆಡಳಿತ ಪಕ್ಷ ಮೊದಲ ಬಾರಿಗೆ ಅಧಿವೇಶನ ನಡೆಸುತ್ತಿದ್ದು, ವಿಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾದು ಕುಳಿತಿವೆ. ಈ ಬಾರಿ ಮೂವರು ಮುಖ್ಯಮಂತ್ರಿಗಳು ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲಿದ್ದು, ಅಧಿವೇಶನ ರಂಗೇರುವುದು ಖಂಡಿತ.












Click it and Unblock the Notifications