ಶೆಟ್ಟರ್ ಕನಸಿಗೆ ತಣ್ಣೀರು ಸುರಿದ ಸರ್ಕಾರ

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್, ಆರ್ಥಿಕ ಲೆಕ್ಕಾಚಾರದ ಪ್ರಕಾರ ನೂತನವಾಗಿ 43 ತಾಲೂಕುಗಳನ್ನು ರಚಿಸುವುದು ಕಷ್ಟಕರವಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿ ಪ್ರಸ್ತಾವನೆ ಕೈ ಬಿಡುವ ಸೂಚನೆ ನೀಡಿದ್ದಾರೆ.
ಹಿಂದಿನ ಸರ್ಕಾರ ನೂತನ ತಾಲೂಕುಗಳನ್ನು ರಚಿಸುವ ಪ್ರಸ್ತಾವನೆ ನೀಡಿತ್ತು. ಆರ್ಥಿಕ ಲೆಕ್ಕಾಚಾರ, ಪರಿಣಾಮಗಳನ್ನು ನೋಡಿದರೆ ಇದು ಕಷ್ಟ ಸಾಧ್ಯವಾಗಿದೆ. ಆದ್ದರಿಂದ ಅಗತ್ಯ ಇರುವ ಕಡೆಗಳಲ್ಲಿ ಮಾತ್ರ ತಾಲೂಕು ರಚನೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವರು ಹೇಳಿದರು.
100 ಕೋಟಿ ಖರ್ಚು : ಹೊಸ ತಾಲೂಕುಗಳ ರಚನೆ ಆದರೆ, ಆಡಳಿತ ಸುಗಮವಾಗಲಿದೆ. ಆದರೆ, ನೂತನ ತಾಲೂಕು ಕೇಂದ್ರಗಳಿಗೆ ಮೂಲ ಸೌಲಭ್ಯ ಒದಗಿಸಲು ಕನಿಷ್ಟ 100 ಕೋಟಿ ರೂ.ಅಗತ್ಯವಿದೆ. ಇದರಿಂದಾಗಿ ತಾಲೂಕು ಘೋಷಣೆ ಪ್ರಸ್ತಾವನೆ ಸದ್ಯ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಸಚಿವರು ವಿಶ್ಲೇಷಿಸಿದ್ದಾರೆ.
ಎಂ.ಬಿ.ಪ್ರಕಾಶ್ ಸೇರಿದಂತೆ ವಿವಿಧ ಸಮಿತಿಗಳ ವರದಿ ಆಧರಿಸಿ ರಾಜ್ಯದಲ್ಲಿ ನೂತನವಾಗಿ 43 ತಾಲೂಕುಗಳ ರಚಿಸಲು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಒಪ್ಪಿಗೆ ನೀಡಿದ್ದರು. ಪ್ರತಿ ತಾಲೂಕಿಗೆ 2 ಕೋಟಿ ರೂ.ಗಳಂತೆ 86 ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ಮೀಸಲಾಗಿಟ್ಟಿದ್ದರು.(ಕರ್ನಾಟಕ ಬಜೆಟ್ 2013-14 ಮುಖ್ಯಾಂಶಗಳು)
ಶೆಟ್ಟರ್ ಮುನಿಸು : ನೂತನ ಸರ್ಕಾರ 43 ತಾಲೂಕುಗಳ ಘೋಷಣೆಯನ್ನು ರದ್ದು ಪಡಿಸುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ. ಆಡಳಿತ ವಿಕೇಂದ್ರಿಕರಣದ ದೃಷ್ಠಿಯಿಂದ ಹೊಸ ತಾಲೂಕುಗಳ ಘೋಷಣೆ ಉತ್ತಮವಾಗಿದೆ.
ಕಾಂಗ್ರೆಸ್ ಸರ್ಕಾರ ಹಿಂದಿನ ಸರ್ಕಾರಗಳ ಜನಪರ ಯೋಜನೆಗಳನ್ನು ರದ್ದುಗೊಳಿಸಿ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ಶೆಟ್ಟರ್ ದೂರಿದರು. 43 ತಾಲೂಕುಗಳ ರಚನೆಯಿಂದಾಗಿ ಹಣದ ಹೊರೆಯಾಗುವುದಿಲ್ಲ. ಬಜೆಟ್ ನಲ್ಲಿ ಅನುದಾನ ಮೀಸಲಿಡಲಾಗಿದೆ ಎಂದು ಹೇಳಿದರು.
ಪ್ರತಿಭಟನೆ : ನೂತನ ತಾಲೂಕು ರಚಿಸುವ ನಿರ್ಧಾರದಿಂದ ಹಿಂಪಡೆಯುವ ಸರ್ಕಾರದ ನಿರ್ಧಾರ ಖಂಡಿಸಿ ಹುಬ್ಬಳ್ಳಿ, ಮಂಗಳೂರು ಮುಂತಾದ ಜಿಲ್ಲೆಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಬಜೆಟ್ ನಲ್ಲಿ ಘೋಷಿಸಿದ ಪ್ರಸ್ತಾವನೆಯನ್ನು ಅನುಷ್ಠಾನಗೊಳಿಸುವಂತೆ ಬಿಜೆಪಿ ಒತ್ತಾಯಿಸಿದೆ.
ಸಿಎಂ ಸಿದ್ದರಾಮಯ್ಯ ಅವರ ನೂತನ ಸರ್ಕಾರ, ಹಿಂದಿನ ಬಿಜೆಪಿ ಸರ್ಕಾರದ ಪ್ರಸ್ತಾವನೆ ಮೂಲೆಗೆ ತಳ್ಳುವ ತಂತ್ರ ರೂಪಿಸಿದೆ. ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದು, ಮುಂದೇನಾಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.












Click it and Unblock the Notifications