ಸೌದಿ ಅರೇಬಿಯಾದಿಂದ ಸಾವಿರಾರು ನೌಕರರು ಭಾರತಕ್ಕೆ

'ನಿತಾಕತ್' ಎಂದು ಕರೆಯಲಾಗುವ ಸೌದಿ ಅರೇಬಿಯಾದ ಹೊಸ ಕಾರ್ಮಿಕ ನೀತಿಯ ಪ್ರಕಾರ, ಸ್ಥಳೀಯ ಕಂಪನಿಗಳು ಹೊರದೇಶದಿಂದ ಬರುವ ಪ್ರತಿ ಹತ್ತು ಕೆಲಸಗಾರರಲ್ಲಿ ಒಬ್ಬರು ಸ್ಥಳೀಯ ಕೆಲಸಗಾರರಿರಬೇಕು. ಈ ನೀತಿ ಜಾರಿಗೆ ಬಂದರೆ ಸಹಸ್ರಾರು ಭಾರತೀಯರು ಕೆಲಸ ಕಳೆದುಕೊಳ್ಳುತ್ತೇವೆಂಬ ಭಯದಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಈ ಭಯವೇ ಅವರು ಭಾರತಕ್ಕೆ ಮರಳುವಂತೆ ಪ್ರೇರೇಪಿಸಿದೆ. ಈಗಾಗಲೆ 60 ಸಾವಿರಕ್ಕೂ ಹೆಚ್ಚು ಭಾರತೀಯರು ಎಮರ್ಜೆನ್ಸಿ ಸರ್ಟಿಫಿಕೇಟ್ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಕೆಲಸದ ನಿಮಿತ್ತ ಗಲ್ಫ್ ರಾಷ್ಟ್ರಗಳಿಗೆ ತೆರಳಿದ್ದ 27 ಸಾವಿರಕ್ಕೂ ಹೆಚ್ಚು ಭಾರತೀಯರಿಗೆ ಎಮರ್ಜೆನ್ಸಿ ಸರ್ಟಿಫಿಕೇಟ್ ಭಾರತ ನೀಡಲಿದೆ.
ಸೌದಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಈ ಪ್ರಕ್ರಿಯೆಗೆ ಈಗಾಗಲೆ ಚಾಲನೆ ನೀಡಿದೆ. ರಿಯಾದ್‌ನಲ್ಲಿ 24 ಸಾವಿರ ಅರ್ಜಿಗಳು ಮತ್ತು ಪಶ್ಚಿಮ ಪ್ರಾಂತ್ಯದಲ್ಲಿ 3,700 ಎಮರ್ಜೆನ್ಸಿ ಸರ್ಟಿಫಿಕೇಟ್ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಭಾರತೀಯ ರಾಯಭಾರಿ ಕಚೇರಿ ಅಧಿಕೃತ ಹೇಳಿಕೆ ನೀಡಿದೆ.
ಸೌದಿ ಅರೇಬಿಯಾದಲ್ಲಿ 10 ಲಕ್ಷಕ್ಕೂ ಹೆಚ್ಚು ಭಾರತೀಯರು ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಮೊದಲ ಹಂತದಲ್ಲಿ 15 ಸಾವಿರ ಕಾರ್ಮಿಕರು ಭಾರತಕ್ಕೆ ಮರಳಲು ಅರ್ಜಿ ಸಲ್ಲಿಸಿದ್ದರೆ, ಎರಡನೇ ಹಂತದಲ್ಲಿ 27 ಸಾವಿರ ಕಾರ್ಮಿಕರು ಭಾರತಕ್ಕೆ ಮರಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಕೆಲ ಕಂಪನಿಗಳು 5 ಸಾವಿರ ಭಾರತೀಯರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಮುಂದೆ ಬಂದಿವೆ. ತಾಂತ್ರಿಕ ನಿಪುಣರಿಂದ ಹಿಡಿದು ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆಯವರೆಗೆ 27 ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ. ಈ ನಡುವೆ, ಸೌದಿ ಅರೇಬಿಯಾದೊಡನೆ ಮಾತುಕತೆ ನಡೆಸಲು ಭಾರತದ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷೀದ್ ಅವರು ಸೌದಿ ಅರೇಬಿಯಾಗೆ ತೆರಳಿದ್ದಾರೆ.












Click it and Unblock the Notifications