ಸಂದರ್ಶನ: ಐಪಿಎಲ್ ಕಳ್ಳಾಟವಲ್ಲ, ಕ್ರಿಕೆಟ್ ನಮ್ಮ ಧರ್ಮ
ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಹಂತಕ್ಕೇರದೆ ಮುಗ್ಗರಿಸಿದ್ದಕ್ಕೆ ರಾಮಲಿಂಗಯ್ಯ ಕೂಡಾ ಎಲ್ಲಾ ಅಭಿಮಾನಿಗಳಂತೆ ಬೇಸರಗೊಂಡಿದ್ದಾರೆ. ಕೆಎಸ್ ಸಿಎ ಕ್ರೀಡಾಂಗಣದಲ್ಲಿ ಮೈದಾನ ಸಿಬ್ಬಂದಿಯಾಗಿರುವ ಈತ ದಿನನಿತ್ಯ ಮೈದಾನವನ್ನು ಸ್ವಚ್ಛಗೊಳಿಸುವಂತೆ ಕ್ರಿಕೆಟ್ ಎಂಬ ಸುಂದರ ಕ್ರೀಡೆ ಅಂಟಿರುವ 'ಫಿಕ್ಸಿಂಗ್' ಎಂಬ ಕೊಳಕು ತೊಳೆದರೆ ಎಂದಿನಂತೆ ಕ್ರಿಕೆಟ್ ಲಕ ಲಕ ಹೊಳೆಯಲಿದೆ ಎಂದು ನಂಬಿರುವ ಅಪ್ಪಟ ಕ್ರಿಕೆಟ್ ಫ್ಯಾನ್.
ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್, ಬೆಟ್ಟಿಂಗ್ ಕುರಿತಂತೆ ಮಾತನಾಡಲು ಮೊದಮೊದಲು ಹಿಂಜರಿದ ರಾಮಲಿಂಗಯ್ಯ ಕೊನೆಕೊನೆಗೆ ಅಂಕಿ ಅಂಶ ಸಮೇತ ತನ್ನ ಅನುಭವವನ್ನು ವಿವರಿಸತೊಡಗಿದ ಅಚ್ಚರಿ ಪಡುವ ಸರದಿ ನಮ್ಮದಾಗಿತ್ತು. ಕ್ರಿಕೆಟ್, ಕ್ರಿಕೆಟರ್ಸ್, ಮೈದಾನ, ಪಿಚ್ ಏರುಪೇರು, ಹವಾಮಾನ ಕೈ ಕೊಟ್ಟಾಗ ತಕ್ಷಣಕ್ಕೆ ಕೈಗೊಳ್ಳಬೇಕಾದ ಕ್ರಮ ಸೇರಿದಂತೆ ಹಲವು ವಿಷಯಗಳ ಬಗ್ಗೆ ರಾಮಲಿಂಗಯ್ಯ ಮಾತನಾಡಬಲ್ಲರು.
ಆದರೆ, ನಮ್ಮ ಕಾಲಮಿತಿಯಲ್ಲಿ ಚುಟುಕಾಗಿ ಒಂದೈದು ಪ್ರಶ್ನೆಗಳನ್ನು ಕೇಳಿ ಪಡೆದ ಉತ್ತರವನ್ನು ಇಲ್ಲಿ ನೀಡುತ್ತಿದ್ದೇವೆ. ಒನ್ ಇಂಡಿಯಾ ಕನ್ನಡ ತಂಡ ದಿನನಿತ್ಯ ನಮ್ಮ ನಿಮ್ಮ ನಡುವೆ ಕಾಣಸಿಗುವ ಜನ ಸಾಮಾನ್ಯರ ನಡುವೆ ನಡೆಸಿದ ಸಂಭಾಷಣೆ ಸಂದರ್ಶನ ನಿಮ್ಮ ಮುಂದಿಡುತ್ತಿದ್ದೇವೆ.. ಸಲಹೆ, ಸೂಚನೆ, ತಿರಸ್ಕಾರ, ತಿಳಿ ಮಾತುಗಳಿಗೆ ಮುಕ್ತ ಸ್ವಾಗತ..

ಪ್ರಶ್ನೆ: ಇಂಡಿಯನ್ ಪ್ರಿಮಿಯರ್ ಲೀಗ್ ಕಳ್ಳಾಟದ ಬಗ್ಗೆ ನಿಮಗೇನು ಗೊತ್ತು?
ರಾಮ: ಐಪಿಎಲ್ ಫಿಕ್ಸಿಂಗ್ ಬಗ್ಗೆ ದಿನ ಕೇಳುತ್ತಿದ್ದೇನೆ. ಮೈದಾನ, ಪಿಚ್ ಸರಿ ಪಡಿಸುವುದರ ಜೊತೆಗೆ ಕ್ರಿಕೆಟ್ ಪಂದ್ಯ ಆಡುವುದು ಅದರ ಬಗ್ಗೆ ತಿಳಿದುಕೊಳ್ಳುವುದು ರೂಢಿ. ಫಿಕ್ಸಿಂಗ್ ಇರಬಹುದು ಆದರೆ, ಐಪಿಎಲ್ ಮೋಸದಾಟವಲ್ಲ. ಕಪ್ಪು ಕೊಳೆ ಮೆತ್ತಿಕೊಂಡಿದೆ ಅದನ್ನು ತೊಳೆದು ಸ್ವಚ್ಛಗೊಳಿಸಿದರೆ ಎಲ್ಲಾ ಸರಿ ಹೋಗುತ್ತದೆ.
ಪ್ರಶ್ನೆ: ಐಪಿಎಲ್ ಬ್ಯಾನ್, ಚುಟುಕು ಕ್ರಿಕೆಟ್ ಪಂದ್ಯ ನಿಷೇಧ?
ರಾಮ: ಕ್ರಿಕೆಟ್ ನಮ್ಮ ಜೀವನದ ಅವಿಭಾಜ್ಯ ಅಂಗ. ನನ್ನಂತೆ ಅನೇಕ ಜನರಿಗೆ ಅನ್ನ ನೀಡಿದೆ. ಭಾರತದಲ್ಲಿ ಕ್ರಿಕೆಟ್ ಧರ್ಮವಾಗಿ ಬೆಳೆದಿದೆ. ಧರ್ಮ ಸರಿಯಾಗಿ ಪಾಲಿಸದಿರುವವರನ್ನು ಶಿಕ್ಷಿಸಬೇಕು ಹೊರತು ಧರ್ಮವನ್ನಲ್ಲ. ಬ್ಯಾನ್ ಮಾಡೊದು ಸರಿಯಲ್ಲ
ಪ್ರಶ್ನೆ: ನಿಮ್ಮ ನೆಚ್ಚಿನ ಕ್ರಿಕೆಟರ್ ?
ರಾಮ: ಎಲ್ಲರ ನೆಚ್ಚಿನ ಕ್ರಿಕೆಟರ್ ಆದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್
ಪ್ರಶ್ನೆ: ಸಚಿನ್ ಯಾಕೆ ಫಿಕ್ಸಿಂಗ್ ಬಗ್ಗೆ ಮಾತನಾಡಿಲ್ಲ?
ರಾಮ: ಹೌದು 2000ನೇ ಇಸವಿಯಲ್ಲಿ ಫಿಕ್ಸಿಂಗ್ ಹಗರಣ ಬೆಳಕಿಗೆ ಬಂದಾಗಲೂ ಸಚಿನ್ ಮಾತನಾಡಿರಲಿಲ್ಲ. ಆದರೆ, ಸಚಿನ್ ಮುಂದೆ ನಿಂತು ಅಭಿಮಾನಿಗಳಿಗೆ ಧೈರ್ಯ, ಆತ್ಮವಿಶ್ವಾಸ ತುಂಬಬೇಕು. ಸಚಿನ್ ಗೋಸ್ಕರ ಕ್ರಿಕೆಟ್ ನೋಡುವವರಿದ್ದಾರೆ. ಸಚಿನ್ ಬಂದು ಕ್ರಿಕೆಟ್, ಕ್ರಿಕೆಟರ್ಸ್ ಗೆ ಧೈರ್ಯ ಹೇಳಬೇಕಾಗಿದೆ. ಒಳ್ಳೆದೋ ಕೆಟ್ಟದೋ ಸಂಜಯ್ ದತ್ ಗೆ ಮಹೇಶ್ ಭಟ್ ಸಪೋರ್ಟ್ ಮಾಡ್ತಾರಲ್ಲ ಸಾರ್ ಆ ಥರ.
ಪ್ರಶ್ನೆ: ಫಿಕ್ಸಿಂಗ್ ಭೂತ ಹೇಗೆ ನಾಶ ಮಾಡೋದು?
ರಾಮ: ಒಂದೇ ಏಟಿಗೆ ಬಲಿ ಹಾಕೋದು ಕಷ್ಟ ಸಾರ್. ಹಂತ ಹಂತವಾಗಿ ನಿಯಮ ಬಲಪಡಿಸಬೇಕು. ಅವಕಾಶ ಸಿಗದಿದ್ದಾಗ ಈ ರೀತಿ ದುರಾಸೆ ಹುಟ್ಟುತ್ತದೆ. ಅದನ್ನು ತಪ್ಪಿಸಬೇಕು. ತಪ್ಪಿತಸ್ಥರನ್ನು ಜೈಲಿಗೆ ಕಳಿಸಬೇಕು. ಆಜೀವ ನಿಷೇಧ ಹೇರಬೇಕು.
ಪ್ರಶ್ನೆ: ಆರೋಪಿಗಳ ರೆಕಾರ್ಡ್ ಕ್ಲೀನ್ ಮಾಡಬೇಕಾ?
ರಾಮ: ಇದಕ್ಕೆ ನಾನು ಒಪ್ಪಲ್ಲ ಸಾರ್, ಕ್ರಿಕೆಟ್ ಟೀಂ ಗೇಮ್, ಕುಂಬ್ಳೆ ಸಾರ್ ಅವರು ಯಾಕೆ ಹಾಗೆ ಹೇಳಿದ್ರೋ ಗೊತ್ತಿಲ್ಲ. ವೈಯಕ್ತಿಕ ದಾಖಲೆ ಅಂತ ಇರೋಲ್ಲ. ಬೇಕಾದ್ರೆ ಅವರ ಗಳಿಸಿದ ಹಣ ವಾಪಸ್ ಪಡೆಯಲಿ. ರೆಕಾರ್ಡ್ ಬದಲಾಯಿಸಲು ಸಾಧ್ಯವಿಲ್ಲ.
ಪ್ರಶ್ನೆ: ಕ್ರಿಕೆಟ್ ಗೆ ಐಪಿಎಲ್ ಮಾರಕವೇ?
ರಾಮ: ಮೊದಲೇ ಹೇಳಿದಂತೆ ಐಪಿಲ್ ಇರ್ಬೇಕು. ಕ್ಯೂರಿಯೇಟರ್ಸ್ ಸಾರ್ ಹೇಳಿದಂತೆ ಬೇರೆ ಬೇರೆ ಮಾದರಿ ಪಂದ್ಯಗಳಿಗೆ ಪಿಚ್ ತಯಾರಿಸೋದು ನಮಗೂ ಚಾಲೆಂಜಿಂಗ್ ಆಗಿರುತ್ತದೆ. ಐಪಿಎಲ್ ಟಿ20 ಪಂದ್ಯಗಳು ಕ್ರಿಕೆಟ್ ಗೆ ಮಾರಕವಲ್ಲ. ಕೆಲ ಆಟಗಾರರಿಂದ ಕಳಂಕಗೊಂಡಿದೆ ಅಷ್ಟೇ.












Click it and Unblock the Notifications