ಮುಂಗಾರು ಮಳೆ ಎದುರಿಸಲು ಬಿಬಿಎಂಪಿ ಸನ್ನದ್ಧ

ಇತ್ತೀಚೆಗಷ್ಟೇ ಹವಾಮಾನ ಇಲಾಖೆ ಜೂ. 3ರಂದು ಮುಂಗಾರು ಪ್ರವೇಶಿಸಬಹುದೆಂದಿತ್ತು. ಮಹಾಸೇನ್ ಚಂಡಮಾರುತದ ಎಫೆಕ್ಟ್ ನ ಹೊರತಾಗಿಯೂ ಕೇರಳ ಕರಾವಳಿಗೆ ಮೇ 28ರಂದೇ ಮುಂಗಾರು ಮಳೆ ಪ್ರವೇಶಿಸುವ ಸಾಧ್ಯತೆ ಇದೆ ಎಂದಿದ್ದಾರೆ.
ಹೀಗಾಗಿ ಬೆಂಗಳೂರಿನ ರಸ್ತೆ, ಚರಂಡಿಗಳಲ್ಲಿ ನೀರು ನಿಲ್ಲುವುದನ್ನು ತಪ್ಪಿಸಲು ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ಅಗತ್ಯ ಕ್ರಮ ಜರುಗಿಸಲಾಗಿದೆ. ಮಂಗಳವಾರ(ಮೇ.21) ನಂತರ ಶುಕ್ರವಾರ ಹಾಗೂ ಶನಿವಾರ ಈ ರೀತಿ ಸಾಮೂಹಿಕ ಸ್ವಚ್ಛತಾ ಕಾರ್ಯಕ್ಕೆ ಬಿಬಿಎಂಪಿ ಸಿಬ್ಬಂದಿ ಮುಂದಾಗಲಿದ್ದಾರೆ.
ಸ್ವಚ್ಛತೆ ಸಾಧ್ಯವೇ?: ಮುಂಗಾರು ಆಗಮನಕ್ಕೆ 10 ದಿನ ಮುಂದಿಟ್ಟುಕೊಂಡು ಬಿಬಿಎಂಪಿ ತಯಾರಿ ನಡೆಸಿರುವುದು ನಗೆ ಉಕ್ಕಿಸುತ್ತದೆ. ವಲಯವಾರು ಅಧಿಕಾರಿಗಳಿಗೆ ಸೂಕ್ತ ಸಮಯಕ್ಕೆ ಸೂಚನೆ ಸಿಕ್ಕಿದ್ದರೂ ಇರುವ ಕಾಲಾವಕಾಶದಲ್ಲಿ ಟೆಂಡರ್ ಕರೆದು(ನಿಯಮ ಪ್ರಕಾರ ಟೆಂಡರ್ ಪ್ರಕ್ರಿಯೆಗೆ 7 ದಿನ ಕಾಲ ಬೇಕು) ಸ್ವಚ್ಛತಾ ಕಾರ್ಯ ಪೂರೈಸಲು ಸಾಧ್ಯವಿಲ್ಲ.
ಬೇಸಿಗೆಯಲ್ಲಿ ಅಧಿಕಾರಿಗಳು ಏನು ಮಾಡುತ್ತಿದ್ದರು. ಮೇಯರ್ ವೆಂಕಟೇಶ್ ಮೂರ್ತಿ ನಿರ್ಲಕ್ಷ್ಯ ಇದರಲ್ಲಿ ಎದ್ದು ಕಾಣುತ್ತದೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಈ ಕಾರ್ಯ ಆಗಬೇಕಾಗಿತ್ತು ಎಂದು ಬಿಬಿಎಂಪಿ ವಿಪಕ್ಷ ನಾಯಕ ಎಂಕೆ ಗುಣಶೇಖರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜಾಹೀರಾತು ತೆರವು ಕಾರ್ಯ: ಪಾಲಿಕೆ ವ್ಯಾಪ್ತಿಯ ಪ್ರದೇಶಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಜಾಹೀರಾತು ಹೋರ್ಡಿಂಗ್ಸ್, ಫ್ಲೆಕ್ಸ್, ಕಟೌಟ್ ಗಳು ಸೇರಿದಂತೆ ಎಲ್ಲಾ ಅನಧಿಕೃತ ಜಾಹೀರಾತು ಫಲಕಗಳನ್ನು 24 ಗಂಟೆಯೊಳಗೆ ತೆರವುಗೊಳಿಸಿದ್ದರೆ ಭಾರಿ ದಂಡ ವಸೂಲಿ ಮಾಡಬೇಕು ಎಂದು ಆಯುಕ್ತ ಸಿದ್ದಯ್ಯ ಆದೇಶಿಸಿದ್ದಾರೆ.
ಇತ್ತೀಚೆಗೆ ಹೆಬ್ಬಾಳ ರಿಂಗ್ ರಸ್ತೆಯಲ್ಲಿ ನಾಗವಾರ ಸಿಗ್ನಲ್ ಹತ್ತಿರ ಹೋರ್ಡಿಂಗ್ ಬಡಿದು ವಾಹನ ಸವಾರರೊಬ್ಬರು ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು.
ಮತ್ತೆ ತಮಟೆ ಸದ್ದು: ನಗರ ಪಾಲಿಕೆ ವ್ಯಾಪ್ತಿಯ ಜಾಹೀರಾತುಗಳಿಂದ ಬಾಕಿ ಉಳಿದಿರುವ 150 ಕೋಟಿ ರೂ. ತೆರಿಗೆ ವಸೂಲಿ ಮಾಡುವಂತೆ ಆಯುಕ್ತ ಸಿದ್ದಯ್ಯ ಅಧಿಕಾರಿಗಳು ಸೂಚಿಸಿದ್ದಾರೆ. ಕಚೇರಿಯ ಎದುರು ತಮಟೆ ಬಾರಿಸುವ ಚಳವಳಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸೇರಿದಂತೆ ಇತರೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ
ಆದೇಶಿಸಿದ್ದಾರೆ.
ಮಳೆ ಅಬ್ಬರ ಶುರು: ಸೋಮವಾರದ ಮಳೆಗೆ ವಾಹನ ಸವಾರರು, ದ್ವಿಚಕ್ರ ವಾಹನ ಸವಾರರು ಮತ್ತು ದಾರಿಹೋಕರು ವಾಹನ ದಟ್ಟಣೆಯಿಂದ ಗಂಟೆಗಟ್ಟಲೇ ರಸ್ತೆಯಲ್ಲಿ ಕಳೆಯ ಬೇಕಾಯಿತು.
ಬಸವನಗುಡಿ, ಚಾಮರಾಜಪೇಟೆ, ವಿಜಯನಗರ, ಮಾಗಡಿ ಮುಖ್ಯ ರಸ್ತೆ, ಓಕಳಿಪುರ, ಮೆಜೆಸ್ಟಿಕ್, ಶಿವಾಜಿನಗರ, ಶಾಂತಿನಗರ ಹಾಗೂ ಮೈಸೂರು ರಸ್ತೆಗಳಲ್ಲಿರುವ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ಬಸ್ಸಿಗಾಗಿ ಗಂಟೆಗಟ್ಟಲೆ ಕಾದು ಸುಸ್ತಾದರು.
ಮಳೆರಾಯನ ಅಬ್ಬರಕ್ಕೆ ಅಲ್ಲಲ್ಲಿ ಮರಗಳು, ಕೊಂಬೆಗಳು ನೆಲಕ್ಕುರುಳಿವೆ. ಕೋರಮಂಗಲ ಪ್ರಮುಖ ರಸ್ತೆಗಳಲ್ಲಿ 4 ಮರಗಳು, ಬಿ.ಟಿ.ಎಂ.ಬಡಾವಣೆಯಲ್ಲಿ 1 ಮರ, ಜೆ.ಪಿ.ನಗರ 6ನೇ ಹಂತ, ಇಸ್ರೋ ಬಡಾವಣೆ, ವಿದ್ಯಾರಣ್ಯಪುರ, ವಿಜಯನಗರ ಸೇರಿದಂತೆ ಹಲವೆಡೆ ಉರುಳಿದ ಮರಗಳ ಸಂಖ್ಯೆ 10 ದಾಟುತ್ತಿದೆ. ತಗ್ಗು ಪ್ರದೇಶಗಳ ರಸ್ತೆಗಳಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.












Click it and Unblock the Notifications