ಕರ್ನಾಟಕ ಬಿಜೆಪಿಗೆ ಉಸ್ತುವಾರಿ ಗೆಹ್ಲೋಟ್ ಹೆಗಲಿಗೆ

ಸಂಘಟನೆಗಳ ಬದಲಾವಣೆ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಭಾನುವಾರ ಆದೇಶ ಹೊರಡಿಸಿದ್ದು, ಕರ್ನಾಟಕ ಬಿಜೆಪಿ ಉಸ್ತುವಾರಿಯನ್ನು ತಾವರ್ ಚಂದ್ ಗೆಹ್ಲೋಟ್ ಅವರಿಗೆ ವಹಿಸಲಾಗಿದೆ. ರಾಜ್ಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಧರ್ಮೇಂದ್ರ ಪ್ರಧಾನ್ ಅವರಿಗೆ ಬಿಹಾರ ರಾಜ್ಯದ ಉಸ್ತುವಾರಿ ವಹಿಸಲಾಗಿದೆ.
ಗೆಹ್ಲೋಟ್ ಯಾರು : ತಾವರ್ ಚಂದ್ ಗೆಹ್ಲೋಟ್ ಮೂಲತಃ ಮಧ್ಯ ಪ್ರದೇಶದವರು. ಬಿಜೆಪಿಯಲ್ಲಿನ ವಿವಿಧ ಆಡಳಿತಾತ್ಮಕ ಹುದ್ದೆ ನಿರ್ವಹಿಸಿ ಅಪಾರ ಅನುಭವ ಪಡೆದಿದ್ದಾರೆ.14 ನೇ ಲೋಕಸಭೆಗೆ ಮಧ್ಯ ಪ್ರದೇಶದ ಶಾಹಜಾಪುರ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆ ಯಾಗಿದ್ದಾರೆ. ಬಿಹಾರ ರಾಜ್ಯದ ಬಿಜೆಪಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಇವರಿಗೆ ಸದ್ಯ ಕರ್ನಾಟಕದ ಜವಾಬ್ದಾರಿ ವಹಿಸಲಾಗಿದೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಅವರ ಹೆಗಲಿಗೆ ಮಧ್ಯ ಪ್ರದೇಶ ರಾಜ್ಯದ ಉಸ್ತುವಾರಿ ವಹಿಸಲಾಗಿದ್ದು, ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆ ಎದುರಿಸುವ ಹೊಸ್ತಿಲಲ್ಲಿ ನಿಂತಿದ್ದು, ಅನಂತ್ ಕುಮಾರ್ ತಮ್ಮ ಜವಾಬ್ದಾರಿ ಹೇಗೆ ನಿರ್ವಹಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಆಂಧ್ರ ಪ್ರದೇಶದ ಬಂಡಾರು ದತ್ತಾತ್ರೇಯ ಅವರನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಚುನಾವಣಾಣೆಯ ಯೋಜನಾ, ಅನುಷ್ಠಾನ ಮತ್ತು ಸಮನ್ವಯ ಸಮಿತಿಯನ್ನು ಪುನಃ ರಚಿಸಲಾಗಿದ್ದು, ಎಂ.ಅಬ್ಬಾಸ್ ನಖ್ವಿ ಅವರನ್ನು ಸಮನ್ವಯಕಾರರಾಗಿ ನೇಮಿಸಲಾಗಿದೆ.
ಜೆ.ಪಿ.ನಡ್ಡಾ, ಶ್ಯಾಂ ಜಲು, ಬುಪೇಂದ್ರ ಯಾದವ್, ಸುದಾಂಶು ತ್ರಿವೇದಿ ಅವರನ್ನು ನೂತನ ಸಮನ್ವಯ ಸಮಿತಿಯ ಸದಸ್ಯರಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಮೋದಿ ಆಪ್ತ ಹೆಗಲಿಗೆ ಉತ್ತರ ಪ್ರದೇಶ : ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಪರಮಾಪ್ತ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶಾ ಅವರನ್ನು ಉತ್ತರ ಪ್ರದೇಶದ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.
ಬಿಜೆಪಿಯ ಫೈರ್ ಬ್ರಾಂಡ್ ವರುಣ್ ಗಾಂಧಿ ಅವರಿಗೆ ಪಶ್ಚಿಮ ಬಂಗಾಳದ ಹೊಣೆ ವಹಿಸಲಾಗಿದೆ. ಸ್ಮೃತಿ ಇರಾನಿ ಅವರಿಗೆ ಗೋವಾ, ಶಾಂತ ಕುಮಾರ್ ಅವರಿಗೆ ಪಂಜಾಬ್ ರಾಜ್ಯದ ಉಸ್ತುವಾರಿ ನೀಡಲಾಗಿದೆ.
ಮುಂಬರುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಗೆಲವು ಸಾಧಿಸಿ, ಲೋಕಸಭೆ ಚುನಾವಣೆಯ ಬಲ ಹೆಚ್ಚಿಸಿಕೊಳ್ಳಲು ಆಲೋಚನೆ ನಡೆಸಿರುವ ಬಿಜೆಪಿ ರಾಜ್ಯದ ಉಸ್ತುವಾರಿಗಳನ್ನು ಬದಲಾವಣೆ ಮಾಡಿದೆ. ಇದರ ಫಲಿತಾಂಶವೇನು ಎಂದು ಚುನಾವಣೆಯ ನಂತರ ತಿಳಿಯಲಿದೆ.












Click it and Unblock the Notifications