ಮಗನ ಕಿರುಕುಳ ತಪ್ಪಿಸಿ, ಮಾಜಿ ಮುಖ್ಯ ನ್ಯಾಯಮೂರ್ತಿ

ಪಂಜಾಬ್ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಶಾಂತಿ ಸ್ವರೂಪ್ ದೇವನ್ ಅವರು ಮಗನಿಂದ ರಕ್ಷಣೆ ನೀಡುವಂತೆ ಕೋರಿ ಕೋರ್ಟ್ ಮೇಟ್ಟಿಲೇರಿದ್ದಾರೆ. ಮಗನ ಕಿರುಕುಳದಿಂದಾಗಿ ತಮಗೆ ನೆಮ್ಮದಿ ಇಲ್ಲದಂತಾಗಿದೆ. ಅವನಿಗೆ ಪ್ರತ್ಯೇಕವಾಗಿ ವಾಸಿಸಲು ಆದೇಶಿಸಬೇಕೆಂದು ದೇವನ್ ಕೋರಿದ್ದಾರೆ.
ಮಾಜಿ ಮುಖ್ಯ ನ್ಯಾಯಮೂರ್ತಿಗಳಾದ ದೇವನ್ ತಮ್ಮ ಸೇವಾವಧಿಯಲ್ಲಿ ಅದೆಷ್ಟು ಸಾವಿರ ಕುಟುಂಬ ವ್ಯಾಜ್ಯ ಪ್ರಕರಣಗಳನ್ನು ಬಗೆಹರಿಸಿದ್ದಾರೋ?, ಅದೆಷ್ಟು ಅಪ್ಪ-ಮಕ್ಕಳನ್ನು ಒಂದು ಮಾಡಿದ್ದಾರೋ ತಿಳಿಯದು ಆದರೆ, ಅಂತಹ ನ್ಯಾಯಾಧೀಶರೇ ಕೋರ್ಟ್ ಮೆಟ್ಟಿಲೇರಿರುವುದು ಅಚ್ಚರಿ ಮೂಡಿಸಿದೆ.
ಪ್ರಕರಣವೇನು : ನ್ಯಾ.ದೇವನ್ ಅವರಿಗೆ ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ. ಪುತ್ರಿಯರಿಬ್ಬರಿಗೂ ಮದುವೆಯಾಗಿ ಗಂಡಂದಿರ ಮನೆಯಲ್ಲಿದ್ದಾರೆ. ಪುತ್ರ ಮಾತ್ರ ತನ್ನ ಕುಟುಂಬ ಸಮೇತ ನ್ಯಾಯಮೂರ್ತಿ ಮತ್ತು ಅವರ ಪತ್ನಿಯ ಜೊತೆಯಲ್ಲಿ ನೆಲೆಸಿದ್ದಾನೆ.
ಆದರೆ, ಆತ ಮಾಜಿ ಮುಖ್ಯ ನ್ಯಾಯಮೂರ್ತಿಗಳಿಗೆ ವಿಪರೀತ ಕಿರುಕುಳ ನೀಡುತ್ತಿದ್ದಾನೆ. ತಮ್ಮ ಇಳಿವಯಸ್ಸಿನಲ್ಲಿ ಇನ್ನಿಲ್ಲದಂತೆ ದೇವನ್ ಅವರನ್ನು ಕಾಡುತ್ತಿದ್ದಾನೆ. ತಮ್ಮದೇ ಮನೆಯಲ್ಲಿ ನ್ಯಾಯಮೂರ್ತಿ ದಂಪತಿ ಆತಂಕದಿಂದ ಬದುಕುವಷ್ಟು ಪುತ್ರ ಕಾಟ ಕೊಡುತ್ತಿದ್ದಾನೆ.
ಮಗನ ಕಿರುಕುಳದಿಂದ ಬೇಸತ್ತ ನ್ಯಾಯಮೂರ್ತಿ ದೇವನ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮಗನಿಗೆ ಬೇರೆ ಮನೆ ಮಾಡಿಕೊಂಡು ಹೋಗಲು ಆದೇಶ ನೀಡಬೇಕೆಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯ ಪ್ರಕರಣದ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ದೇವನ್ ದಂಪತಿ ಮನೆಗೆ ತೆರಳಿ ಅವರ ಯೋಗಕ್ಷೇಮ ವಿಚಾರಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದೆ. ಮಗನ ಕಿರುಕುಳದಿಂದ ನ್ಯಾಯಮೂರ್ತಿಗಳನ್ನು ಮುಕ್ತಿಗೊಳಿಸಿ, ಅವರ ಘನತೆ ಕಾಪಾಡುವಂತೆ ಪೊಲೀಸರಿಗೆ ಕಟ್ಟುನಿಟ್ಟಾಗಿ ಆದೇಶಿಸಿದೆ.












Click it and Unblock the Notifications