ಕಳಂಕಿತರು ಸೇರಿ 24 ಮಂದಿ ಪಟ್ಟಿಗೆ ಸೋನಿಯಾ ಓಕೆ?

ಮೊದಲ ಹಂತದಲ್ಲಿ ಎಷ್ಟು ಮಂದಿ ಸಂಪುಟ ಸೇರಲಿದ್ದಾರೆ ಎಂಬ ಅಂಕಿ ಸಂಖ್ಯೆ ಬದಲಾದರೂ ರಾಜಭವನದಲ್ಲಿ ಶನಿವಾರ(ಮೇ.18) ಸಚಿವರುಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವುದು ಗ್ಯಾರಂಟಿಯಾಗಿದೆ. ಈ ಬಾರಿ 121 ಸ್ಥಾನ ಗೆದ್ದಿರುವ ಕಾಂಗ್ರೆಸ್ ಪಕ್ಷ ಆಡಳಿತ ಚುಕ್ಕಾಣಿ ಹಿಡಿದ ಮೇಲೆ ಸಿದ್ದರಾಮಯ್ಯ ಅವರನ್ನು ಸೇರಿ 33 ಸಚಿವ ಸ್ಥಾನಗಳನ್ನು ತುಂಬುವ ಸರ್ಕಸ್ ನಡೆಸಿದೆ.
3 ರಿಂದ 6 ಬಾರಿ ಗೆದ್ದವರು, 30ಕ್ಕೂ ಅಧಿಕ ಮಂದಿ ಮಾಜಿ ಸಚಿವರು. ಮಾಜಿ ಸ್ಪೀಕರ್ ಗಳು, ಸಿಎಂ ಸ್ಥಾನಕ್ಕಾಗಿ ಸ್ಪರ್ಧೆಗಿಳಿದವರ ಜೊತೆಗೆ ಕಳಂಕಿತರನ್ನು ಅಳೆದು ತೂಗಿ ಫಿಲ್ಟರ್ ಮಾಡಿ 40 ಮಂದಿಯಿದ್ದ ಪಟ್ಟಿಯನ್ನು ಮೊದಲ ಹಂತಕ್ಕೆ 24ಕ್ಕೆ ಇಳಿಸಲಾಗಿದೆ. ಅದರಲ್ಲಿ 12 ಜನರ ಹೆಸರಿಗೆ ಹೈಕಮಾಂಡ್ ತಕ್ಷಣವೇ ಓಕೆ ಎಂದಿದೆ. ಮಿಕ್ಕವರ ಹೆಸರಿನ ಬಗ್ಗೆ ಚರ್ಚೆ ನಡೆದಿದ್ದು, ಕಳಂಕಿತರ ಹೆಸರುಗಳು ಕಾಣಿಸಿಕೊಂಡಿರುವುದು ಗಮನಾರ್ಹ. ಶುಕ್ರವಾರ ಸಂಜೆ ಯಾರಿಗೆ ಸಿಹಿ ಸುದ್ದಿ ತರುತ್ತದೋ ಕಾದು ನೋಡಬೇಕಿದೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ರಾಜ್ಯ ಉಸ್ತುವಾರಿ ಮಧುಸೂದನ್ ಮಿಸ್ತ್ರಿ ಸೇರಿದಂತೆ ಇತರೆ ಪ್ರಮುಖ ನಾಯಕರು ಅಂತಿಮ ನಿರ್ಧಾರವುಳ್ಳ ಪಟ್ಟಿಯನ್ನು ಲಕೋಟೆಯಲ್ಲಿ ಹಾಕಿ ರಾಜ್ಯದ ನಾಯಕರಿಗೆ ತಲುಪಿಸಲಿದ್ದಾರೆ. ಲಕೋಟೆ ಓಪನ್ ಆಗುವ ಮುನ್ನ ಸಚಿವ ಸ್ಥಾನ ಆಕಾಂಕ್ಷಿಗಳಾದ ಶಾಸಕರ ಪಟ್ಟಿ ನೋಡಿ... ಮೊದಲ ಪಟ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯರಿಗೆ ಸ್ಥಾನವಿಲ್ಲ.
* ಎಚ್.ಕೆ.ಪಾಟೀಲ್- ಗದಗ
* ಆರ್.ವಿ.ದೇಶಪಾಂಡೆ- ಹಳಿಯಾಳ
* ಟಿ.ಬಿ.ಜಯಚಂದ್ರ- ಶಿರಾ
* ಅಂಬರೀಷ್- ಮಂಡ್ಯ
* ಮೋಟಮ್ಮ- ಮೂಡಿಗೆರೆ
* ಡಿ.ಕೆ. ಶಿವಕುಮಾರ್- ಕನಕಪುರ
* ಪ್ರಕಾಶ್ ಹುಕ್ಕೇರಿ- ಚಿಕ್ಕೋಡಿ-ಸದಲಗಾ
* ಎಚ್ ಆಂಜನೇಯ-ಚಿತ್ರದುರ್ಗ
* ಸತೀಶ್ ಜಾರಕಿಹೊಳಿ- ಯಮಕನಮರಡಿ
* ರಾಮಲಿಂಗಾರೆಡ್ಡಿ- ಬಿಟಿಎಂ ಲೇಔಟ್
* ಕೆ.ಜೆ. ಜಾರ್ಜ್- ಸರ್ವಜ್ಞನಗರ
* ರೋಷನ್ ಬೇಗ್- ಶಿವಾಜಿನಗರ
* ಕೃಷ್ಣಬೈರೇಗೌಡ- ಬ್ಯಾಟರಾಯನಪುರ
* ಖಮರುಲ್ ಇಸ್ಲಾಂ- ಗುಲ್ಬರ್ಗಾ ಉತ್ತರ
* ಡಾ. ಶರಣಪ್ರಕಾಶ್ ಪಾಟೀಲ್- ಸೇಡಂ
* ರಮಾನಾಥ ರೈ- ಬಂಟ್ವಾಳ
* ವಿನಯಕುಮಾರ್ ಸೊರಕೆ- ಕಾಪು
* ಅಭಯಚಂದ್ರ ಜೈನ್- ಮೂಡಬಿದರೆ
* ಉಮಾಶ್ರೀ- ತೇರದಾಳ
* ಎಚ್.ಎಸ್. ಮಹದೇವಪ್ರಸಾದ್- ಗುಂಡ್ಲುಪೇಟೆ
* ಡಾ.ಎ.ಬಿ. ಮಾಲಕರೆಡ್ಡಿ- ಯಾದಗಿರಿ
* ಶಾಮನೂರು ಶಿವಶಂಕರಪ್ಪ- ದಾವಣಗೆರೆ ದಕ್ಷಿಣ
* ವಿನಯ್ ಕುಲಕರ್ಣಿ- ಧಾರವಾಡ
* ಎ. ಮಂಜು- ಅರಕಲಗೂಡು
ಬದಲಾವಣೆ ಒಳಪಟ್ಟಿರುವ ಈ ಪಟ್ಟಿಗೆ ಸೇರಲಿರುವ ಬದಲಿ ಶಾಸಕರ ಪೈಕಿ ಬಾಬುರಾವ್ ಚಿಂಚನಸೂರ್ - ಯಾದಗಿರಿ, ಎಂ.ಬಿ.ಪಾಟೀಲ್ - ಬಿಜಾಪುರ, ವೆಂಕಟೇಶ್ ನಾಯಕ್ - ರಾಯಚೂರು, ರಾಜಶೇಖರ್ ಪಾಟೀಲ್ - ಹುಮ್ನಾಬಾದ್-ಬೀದರ್, ಎಚ್.ಸಿ. ಮಹಾದೇವಪ್ಪ - ಮೈಸೂರು, ಶ್ರೀನಿವಾಸ್ ಪ್ರಸಾದ್ - ಮೈಸೂರು, ಪರಮೇಶ್ವರ್ ನಾಯಕ್ - ಬಳ್ಳಾರಿ ಹೆಸರುಗಳು ಕೇಳಿ ಬಂದಿದೆ.











Click it and Unblock the Notifications