'ನೀಟ್' ವಿದ್ಯಾರ್ಥಿಗಳಿಗೆ ಕೋರ್ಟಿನಿಂದ ಸಿಹಿ ಸುದ್ದಿ

ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಗಳ ಹಿತಾಸಕ್ತಿ ಹಿನ್ನೆಲೆಯಲ್ಲಿ ತಾನು ನಿರ್ಧಾರ ಕೈಗೊಳ್ಳಲಾಗುತ್ತಿದೆ. ಇದರಿಂದ ಕರ್ನಾಟಕದಲ್ಲಿ ವೈದ್ಯ ವಿದ್ಯಾರ್ಥಿಗಳ ಪ್ರವೇಶಕ್ಕೆ ಸಂಬಂಧಿಸಿ ಇದ್ದ ಆತಂಕ ನಿವಾರಣೆಯಾಗುತ್ತದೆ. ರಾಜ್ಯದಲ್ಲಿ ಈ ಬಾರಿ ವೈದ್ಯಕೀಯ ಕೋರ್ಸ್ ಗಳಿಗೆ ಪ್ರತ್ಯೇಕ ಸಿಇಟಿ ನಡೆಸಿರಲಿಲ್ಲ.
ಏನಿದು ಪ್ರಾಬ್ಲಂ?: ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ, ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ, ರಾಜ್ಯಗಳು, ವಿವಿಗಳು ಹಾಗೂ ಇತರೆ ಸಂಸ್ಥೆಗಳು ಎಂಬಿಬಿಎಸ್, ಬಿಡಿಎಸ್, ಪಿಜಿಗೆ ಸಂಬಂಧಿಸಿ ತಮ್ಮದೇ ಆದ ಪರೀಕ್ಷೆ ನಡೆಸಬಹುದು. ಆದರೆ, ಮುಂದಿನ ಆದೇಶದವರೆಗೆ ಫಲಿತಾಂಶ ಪ್ರಕಟಿಸುವಂತಿಲ್ಲ ಎಂದು ಡಿ.13, 2013ರಂದು ಸುಪ್ರೀಂ ಆದೇಶ ನೀಡಿತ್ತು.
ಆದರೆ, ವಿಚಾರಣೆಯನ್ನು ನಿಯಮಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ ತನ್ನ ಹಿಂದಿನ ಆದೇಶಕ್ಕೆ ತಿದ್ದುಪಡಿ ಮಾಡಿದ್ದಲ್ಲದೆ, ತಮ್ಮದಲ್ಲದ ತಪ್ಪಿಗೆ ವಿದ್ಯಾರ್ಥಿಗಳು ಕಾನೂನು ತೊಡಕಿನಲ್ಲಿ ಸಿಕ್ಕಿ ಹಾಕಿಕೊಳ್ಳಬಾರದು ಎಂಬ ಉದ್ದೇಶ ಈ ತೀರ್ಮಾನದ ಹಿಂದಿದೆ ಎಂದು ಮು. ನ್ಯಾ. ಅಲ್ತಮಸ್ ಕಬೀರ್ ಅವರಿದ್ದ ಪೀಠ ಹೇಳಿದೆ.
ಒಂದು ವೇಳೆ ಡಿ.13ರ ತೀರ್ಪಲ್ಲಿ ಬದಲಾವಣೆ ಮಾಡದೆ ಹೋದರೆ ಬಹುಸಂಖ್ಯಾತ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗುತ್ತಿತ್ತು. ಅಲ್ಲದೆ, ಹಲವು ಆಸ್ಪತ್ರೆಗಳು ಪಿಜಿ ವೈದ್ಯ ವಿದ್ಯಾರ್ಥಿಗಳಿಲ್ಲದೆ ಸಮಸ್ಯೆ ಎದುರಿಸುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಆದರೆ ಈವರೆಗೆ ಪ್ರವೇಶ ಪರೀಕ್ಷೆಗಳು ನಡೆಯದ ರಾಜ್ಯಗಳಿಗೆ ಈ ಆದೇಶ ಅನ್ವಯ ಆಗುವುದಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.
ಎಂಬಿಬಿಎಸ್ ಹಾಗೂ ಡೆಂಟಲ್ ಕೋರ್ಸಿಗೆ ಸಂಬಂಧಿಸಿ ದೇಶಾದ್ಯಂತ ಇದೇ ಮೊದಲ ಬಾರಿಗೆ ದೇಶವ್ಯಾಪಿ ಏಕರೀತಿಯ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ಎನ್ಇಇಟಿ) ನಡೆಸುವ ಮೆಡಿಕಲ್ ಕೌನ್ಸಿಲ್ಸ್ ನ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ 115 ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ರಾಷ್ಟ್ರೀಯ ಪರೀಕ್ಷಾ ಮಂಡಳಿಯು ಕಳೆದ ಡಿಸೆಂಬರ್ ನಲ್ಲಿ ರಾಷ್ಟ್ರಾದ್ಯಂತ ಏಕರೀತಿಯ ಪ್ರವೇಶ ಪರೀಕ್ಷೆ ನಡೆಸಿತ್ತು.












Click it and Unblock the Notifications