ಕೆಜೆಪಿ ಅಂತಿಮ ಪಟ್ಟಿ ಪ್ರಕಟಗೊಳ್ಳುತ್ತಾ?

ಎಲ್ಲಾ ಪಕ್ಷಗಳಿಗಿಂತ ಮೊದಲು ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ಹೆಗ್ಗಳಿಕೆ ಬಿಜೆಪಿಯದು. ಆದರೆ, ಇನ್ನೂ 25 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಪಕ್ಷ ಕಸರತ್ತು ನಡೆಸಿದೆ. ಬಹುತೇಕ ಇಂದು ಬೆಳಗ್ಗೆ ಅಭ್ಯರ್ಥಿಗಳನ್ನು ಘೋಷಿಸಬಹುದು. ಇಲ್ಲವೇ ನೇರವಾಗಿ ಬಿ ಫಾರಂ ವಿತರಿಸಬಹುದುದಾಗಿದೆ.
ಪಕ್ಷದ ಮೂಲಗಳ ಮಾಹಿತಿ ಪ್ರಕಾರ ಅಂತಿಮ ಪಟ್ಟಿ ಬಿಡುಗಡೆ ಜೊತೆಗೆ ಕೆಲವು ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಿಸಲು ಮುಂದಾಗಿದೆ. ಅದಕ್ಕಾಗಿ ಕಾಂಗ್ರೆಸ್ ಟಿಕೆಟ್ ವಂಚಿತರನ್ನು ಪಕ್ಷಕ್ಕೆ ಸೆಳೆಯಲು ಕೆಜೆಪಿ ಮುಂದಾಗಿದೆ. ಆದರೆ, ಕೈ ಟಿಕೆಟ್ ವಂಚಿತರು ಕೆಜೆಪಿ ಸೇರುವ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳದಿರುವುದು ಪಟ್ಟಿ ಬಿಡುಗಡೆಗೆ ವಿಳಂಬ ಉಂಟು ಮಾಡುತ್ತಿದೆ.
ಕಾಂಗ್ರೆಸ್ ಟಿಕೆಟ್ ಕೈತಪ್ಪಿರುವ ಭದ್ರಾವತಿ ಶಾಸಕ ಸಂಗಮೇಶ್ವರ್, ಕಾರವಾರದ ಸತೀಶ್ ಸೈಲ್, ಶಿರಸಿಯ ಭೀಮಣ್ಣ ನಾಯಕ್, ಬಳ್ಳಾರಿಯ ದಿವಾಕರ ಬಾಬು, ಮದ್ದೂರಿನ ಕಲ್ಪನಾ ಸಿದ್ದರಾಜು ಅವರು ಕೆಜೆಪಿ ಸೇರಲಿದ್ದಾರೆ ಎಂಬ ನಿರೀಕ್ಷೆಯಿಂದಾಗಿ ಕೆಜೆಪಿ ಮುಖಂಡರು ಅಂತಿಮ ಪಟ್ಟಿ ಬಿಡುಗಡೆಗೆ ವಿಳಂಭ ಧೋರಣೆ ಅನುಸರಿಸುತ್ತಿದ್ದಾರೆ.
ಪಕ್ಷದ ನಾಯಕರು ಕೈ ಟಿಕೆಟ್ ವಂಚಿತರೊಂದಿಗೆ ನಿರಂತರವಾಗಿ ಮಾತುಕತೆ ನಡೆಸುತ್ತಿದ್ದರೂ ಮಂಗಳವಾರ ತಡ ರಾತ್ರಿಯ ವರೆಗೆ ಯಾವ ಅಭ್ಯರ್ಥಿಗಳು ತಮ್ಮ ನಿರ್ಧಾರ ಪ್ರಕಟಿಸಿಲ್ಲ. ಆದ್ದರಿಂದ ಮಂಗಳವಾರ ಅಂತಿಮ ಪಟ್ಟಿ ಬಿಡುಗಡೆಗೊಳಿಸಲು ಪಕ್ಷಕ್ಕೆ ಸಾಧ್ಯವಾಗಿಲ್ಲ.
ಕೆಜೆಪಿ ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವುದರಿಂದಲೂ ಹಿನ್ನಡೆ ಉಂಟಾಗಿದೆ.
ಅನೇಕ ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಆದರೆ, ಇದೀಗ ಬೇರೆ ಪಕ್ಷಗಳಿಂದ ಟಿಕೆಟ್ ಸಿಗದೆ ನಿರಾಶರಾದವರಿಗೆ ಕ್ಷೇತ್ರಗಳನ್ನು ನೀಡಬೇಕಾಗಿರುವುದರಿಂದ ಸಮಸ್ಯೆ ಪ್ರಾರಂಭವಾಗಿದೆ.
ಮಂಗಳವಾರ ಬಹುತೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಆದರೆ, ಬೇರೆ ಪಕ್ಷಗಳಿಂದ ವಲಸೆ ಬರುವ ಅಭ್ಯರ್ಥಿಗಳಿಗೆ ಬುಧವಾರ ನೇರವಾರ ಬಿ ಫಾರಂ ನೀಡಲು ಚಿಂತನೆ ನಡೆದಿದೆ. ಪಟ್ಟಿ ಪ್ರಕಟಿಸದೆ ಅಭ್ಯರ್ಥಿಗಳಿಗೆ ಬಿ ಫಾರಂ ನೀಡುತ್ತಾರೆಯೇ ಎಂದು ಕಾದು ನೋಡಬೇಕು.
ಬಿಜೆಪಿ, ಕಾಂಗ್ರೆಸ್ ತಮ್ಮ ಅಂತಿಮ ಪಟ್ಟಿ ಪ್ರಕಟಿಸಿವೆ. ಬಿಎಸ್ಆರ್ ಕಾಂಗ್ರೆಸ್ ಮತ್ತೊಂದು ಪಟ್ಟಿ ಪ್ರಕಟಿಸುವ ಉತ್ಸಾಹದಲ್ಲಿದ್ದಂತೆ ಕಾಣುತ್ತಿಲ್ಲ. ಜೆಡಿಎಸ್ 102 ಅಭ್ಯರ್ಥಿಗಳಿಗೆ ನೇರವಾಗಿ ಬಿ ಫಾರಂ ನೀಡುವ ತಂತ್ರಕ್ಕೆ ಶರಣಾಗಿದೆ. ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ್ದರಿಂದ ವಿಳಂಬ ಮಾಡುವಂತಿಲ್ಲ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications