ತಿಮ್ಮಪ್ಪನಿಗೆ ಮುಖ್ಯಮಂತ್ರಿ ಸಹಪಾಠಿಯ ಚಿನ್ನದ ಮಾಲೆ
ತಿರುಪತಿ, ಏ.17: ವಿಶ್ವವಿಖ್ಯಾತ ತಿರುಪತಿ ತಿಮ್ಮಪ್ಪನಿಗೆ ಅನಿವಾಸಿ ಭಾರತೀಯರೊಬ್ಬರು (ಅಮೆರಿಕದ ಟೆಕ್ಕಿ) 16 ಕೋಟಿ ರೂ. ದೇಣಿಗೆ ಸಲ್ಲಿಸಿ, ಆ ದುಡ್ಡಿನಿಂದ ಸ್ವಾಮಿಗೆ 35 ಕೆಜಿ ಚಿನ್ನದಲ್ಲಿ ತಯಾರಿಸಿದ ಸಹಸ್ರ ನಾಮ ಮಾಲೆಯನ್ನು ತೊಡಿಸಿ ಎಂದು ಕೈಮುಗಿದಿದ್ದಾರೆ.
ಈ ಸಂಬಂಧ, ಅಮೆರಿಕದ ಉದ್ಯಮಿ ರಾಮಲಿಂಗ ರಾಜು ಅವರು ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯ (ಟಿಟಿಡಿ) ಅಧ್ಯಕ್ಷ ಕೆ ಬಾಪಿರಾಜು ಅವರಿಗೆ 16 ಕೋಟಿ ರೂ. ಮೊತ್ತದ ಡಿಡಿಯನ್ನು ಮಂಗಳವಾರ ಹಸ್ತಾಂತರಿಸಿದರು.

ಇದರಲ್ಲಿ 11 ಕೋಟಿ ರೂಪಾಯಿಯನ್ನು 35 ಕೆಜಿ ಚಿನ್ನದ ಸಹಸ್ರ ನಾಮ ಮಾಲೆ ತಯಾರಿಸಲು ಮತ್ತು ಉಳಿದ 5 ಕೋಟಿ ಹಣವನ್ನು ತಿರುಚನೂರ್ ಬಳಿ ನಿರ್ಮಿಸಲಾಗುತ್ತಿರುವ ಉಚಿತ ಭೋಜನಾಲಯ ನಿರ್ಮಾಣದ ಕಾಮಗಾರಿಗೆ ಬಳಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ಇದಷ್ಟೇ ಅಲ್ಲದೆ ಇನ್ನೂ 65 ಲಕ್ಷ ರೂ. ಕಾಣಿಕೆ ನೀಡುವ ಇಚ್ಛೆ ವ್ಯಕ್ತಪಡಿಸಿದ ಎನ್ನಾರೈ ರಾಜು ಅವರು ಈ ಹಣದಿಂದ ಶ್ರೀವಾರಿ ಪಾದಾಲು (ತಿಮ್ಮಪ್ಪನ ಸನ್ನಧಿಯಲ್ಲಿರುವ ಸ್ಥಳ) ಬಳಿ ಧ್ಯಾನ ಮಂದಿರ ನಿರ್ಮಿಸಬೇಕು ಎಂದು ಆಶಿಸಿದ್ದಾರೆ.
ಗಮನಾರ್ಹವೆಂದರೆ ಎನ್ನಾರೈ ರಾಮಲಿಂಗ ರಾಜು ಅವರು ಹೈದರಾಬಾದಿನಲ್ಲಿರುವ ಪಬ್ಲಿಕ್ ಸ್ಕೂಲಿನಲ್ಲಿ ಆಂಧ್ರದ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರ ಸಹಪಾಠಿಯಾಗಿದ್ದರು!
ಕುತೂಹಲದ ಸಂಗತಿಯೆಂದರೆ ವೇಂಕಟೇಶ್ವರನ ಕೊರಳಲ್ಲಿ ಈಗಿರುವ ನೆಕ್ಲೇಸ್ ಅನ್ನು ಸಹ ಇದೇ ಮುಖ್ಯಮಂತ್ರಿ ಸಹಪಾಠಿ ರಾಜು ಅವರ ಮೊಮ್ಮಗ ಈ ಹಿಂದೆ ಅರ್ಪಿಸಿದ್ದಾರೆ.












Click it and Unblock the Notifications