ಬಂಡಾಯಗಾರ ಅನಿಲ್ ಲಾಡ್ ಪಕ್ಷದಿಂದ ಉಚ್ಚಾಟನೆ ?

ಬಳ್ಳಾರಿ ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ರಾಜ್ಯ ಸಭಾ ಸದಸ್ಯ ಅನಿಲ್ ಲಾಡ್ ಕಾಂಗ್ರೆಸ್ ನಾಯಕರ ಮಾತಿಗೆ ಮನ್ನಣೆ ನೀಡುತ್ತಿಲ್ಲ. ಟಿಕೆಟ್ ನೀಡದಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಎಚ್ಚರಿಕೆ ನೀಡುತ್ತಿದ್ದಾರೆ.
ಇದರಿಂದ ಕೋಪಗೊಂಡಿರುವ ನಾಯಕರು ಪಕ್ಷದಿಂದ ಲಾಡ್ ರನ್ನು ಉಚ್ಚಾಟಿಸುವ ನಿರ್ಣಯ ಕೈಗೊಂಡಿದ್ದಾರೆ. ಟಿಕೆಟ್ ಘೋಷಣೆಯಾದ ನಂತರವೂ ಲಾಡ್ ವರ್ತನೆ ಮುಂದುವರೆದರೆ ಶಿಸ್ತು ಕ್ರಮ ಜರುಗಿಸಲು ನಾಯಕರು ಚಿಂತನೆ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ತಮಗೆ ಕಾಂಗ್ರೆಸ್ ಟಿಕೆಟ್ ದೊರೆಯುವುದಿಲ್ಲ ಎಂದು ಖಾತ್ರಿಯಾದ ಲಾಡ್, ಬಳ್ಳಾರಿ ಜಿಲ್ಲೆಯಲ್ಲಿ ತಮ್ಮ ಬೆಂಬಲಿಗರಿಗೆ ಮಾತ್ರ ಟಿಕೆಟ್ ನೀಡಬೇಕು. ಈಗ ತಯಾರಿಗೊಳಿಸಿರುವ ಪಟ್ಟಿ ಬದಲಾವಣೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡೀಸ್ ಮಾತಿಗೂ ಮನ್ನಣೆ ನೀಡದೆ ಲಾಡ್ ಬಂಡಾಯದ ಕಹಳೆ ಊದುತ್ತಿದ್ದಾರೆ. ಸಂಧಾನ ಸಭೆಯ ಬಳಿಕ ಮಾಧ್ಯಮಗಳ ಮುಂದೆ ಬಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಗಣಿಧಣಿಯಾಗಿರುವ ಲಾಡ್ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿಲ್ಲ. ಅವರು ವಾಣಿಜ್ಯೋದ್ಯಮಿ ಆದ್ದರಿಂದ ಅವರನ್ನು ಉಚ್ಚಾಟಿಸಿ ಬಂಡಾಯ ಶಮನ ಮಾಡುವ ಧೃಡ ನಿರ್ಧಾರಕ್ಕೆ ಹೈ ಕಮಾಂಡ್ ನಾಯಕರು ಬಂದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಲಾಡ್ ಉಚ್ಚಾಟನೆ ಕುರಿತಂತೆ ಕೇಂದ್ರ ನಾಯಕರು ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಅವರಿಗೂ ಮಾಹಿತಿ ನೀಡಿದ್ದಾರೆ. ಆದರೆ, ಪಟ್ಟಿ ಬಿಡುಗಡೆವರೆಗೆ ಕಾದು ನೋಡೋಣ ಎಂದು ಸೋನಿಯಾ ನಾಯಕರಿಗೆ ಕಿವಿಮಾತು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಪಕ್ಷದ ಹಿರಿಯ ನಾಯಕರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ ಮುಂತಾದವರ ವಿರುದ್ಧ ಬಹಿರಂವಾಗಿ ಕಾದಾಟಕ್ಕೆ ಇಳಿದಿರುವ ಲಾಡ್ ರನ್ನು ಉಚ್ಚಾಟಿಸಿದರೆ, ರಾಜ್ಯದಲ್ಲಿ ಬಂಡಾಯದ ಬಾವುಟ ಹಾರಿಸುತ್ತಿರುವ ಇತರ ನಾಯಕರಿಗೂ ಎಚ್ಚರಿಕೆಯ ಸಂದೇಶ ರವಾನೆಯಾಗುತ್ತದೆ ಎಂಬುದು ಪಕ್ಷದ ಆಲೋಚನೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications