ತುಮಕೂರು: ಸ್ವಂತ ಮಗನೇ ಬೆನ್ನಿಗೆ ಚೂರಿ ಹಾಕಿದ
ತುಮಕೂರು, ಏ.10: ಕೆಜೆಪಿ ನಾಯಕ, ಮಾಜಿ ಮುಖ್ಯಮಮತ್ರಿ ಬಿಎಸ್ ಯಡಿಯೂರಪ್ಪ ಅವರು ಈ ಬಾರಿ ಚುನಾವಣೆ ಪ್ರಚಾರದ ವೇಳೆ ತಮಗೆ ಯಾರೆಲ್ಲ ಕೈಕೊಟ್ಟರೋ ಅವರ ಜಾತಕ ಹರಾಜು ಹಾಕುವ ಒಂದಂಶದ ಕಾರ್ಯಕ್ರಮವನ್ನು ಹಾಕಿಕೊಂಡಿದ್ದಾರೆ.
ಕೈಕೊಟ್ಟ ನಾಯಕರ ಕ್ಷೇತ್ರಗಳಿಗೆ ಕಾಲಿಟ್ಟ ಮರುಘಳಿಗೆಯೇ ಯಡಿಯೂರಪ್ಪ ಮಾತುತಪ್ಪಿದ ನಾಯಕರನ್ನು ಸ್ವಲ್ಪ ವಿಚಾರಿಸಿಕೊಳ್ಳಿ ಎಂದು ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ. ತುಮಕೂರು ಗ್ರಾಮಾಂತರ ಶಾಸಕ ಬಿ ಸುರೇಶ್‌ಗೌಡರನ್ನು ನಿನ್ನೆ ಟಾರ್ಗೆಟ್ ಮಾಡಿದ ಬಿಎಸ್‌ವೈ, ನನ್ನನ್ನು ತಂದೆ ಸಮಾನ ಎಂದು ಹೇಳಿಕೊಂಡು, ನನ್ನಿಂದ ಸಾಧ್ಯವಾದಷ್ಟೂ ಅಭಿವೃದ್ಧಿ ಕೆಲಸಗಳಿಗೆ ಹಣ ಬಿಡುಗಡೆ ಮಾಡಿಸಿಕೊಂಡು, ಬೆನ್ನಿಗೆ ಚೂರಿ ಹಾಕಿರುವ ಸುರೇಶ್‌ಗೌಡರನ್ನು ಸೋಲಿಸುವ ಮೂಲಕ ಕ್ಷೇತ್ರದ ಜನ ಆತನಿಗೆ ಬುದ್ಧಿ ಕಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ಶೂಲದ ಅಂಜನೇಯ ದೇವಾಲಯದ ಬಳಿ ಕೆಜೆಪಿ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
'ನನ್ನ ಬಳಿ ಅತಿ ವಿನಯದಿಂದ ನಡೆದುಕೊಂಡ ಪರಿಣಾಮ ಈ ನಿಮ್ಮ ತುಮಕೂರು ಗ್ರಾಮಾಂತರ ಕ್ಷೇತ್ರವನ್ನು ದತ್ತು ಪಡೆದ ರೀತಿ ಕುಡಿಯುವ ನೀರು, ರಸ್ತೆ, ಒಳಚರಂಡಿ, ಆಶ್ರಯ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಮಂಜೂರು ಮಾಡಿಕೊಟ್ಟೆ. 'ಇದ್ದರೂ ನಿಮ್ಮ ಜೊತೆ, ಸತ್ತರು ನಿಮ್ಮ ಜೊತೆ' ಎಂದೇ ಹೇಳುತ್ತಿದ್ದ ಸುರೇಶ್ ಗೌಡನನ್ನು ನನ್ನ ಸ್ವಂತ ಮಗನಂತೆ ಭಾವಿಸಿ ಕೆಲಸ ಮಾಡಿಕೊಟ್ಟೆ. ಕೊನೆಗೂ ನನ್ನ ಬೆನ್ನಿಗೇ ಚೂರಿ ಹಾಕಿದ' ಎಂದು ಅವರು ತೀವ್ರ ವಿಷಾದ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಮತ್ತೂ ಒಂದು ವಿಷಯವನ್ನು ಸ್ಪಷ್ಟಪಡಿಸಿದರು. 'ನಾನು ಮುಖ್ಯಮಂತ್ರಿಯಾಗಿದ್ದಾಗ ಎಂದಿಗೂ ಜಾತಿ ನೋಡಲಿಲ್ಲ. ಆದರೂ ನನ್ನನ್ನು ಒಕ್ಕಲಿಗರ ವಿರೋಧಿ ಎಂಬಂತೆ ಬಿಂಬಿಸಲಾಗುತ್ತಿದೆ. ನಾನು ಒಕ್ಕಲಿಗ ವಿರೋಧಿಯಲ್ಲ. ಇಬ್ಬರು ಒಕ್ಕಲಿಗರನ್ನು ಮುಖ್ಯಮಂತ್ರಿ ಮಾಡಿದ್ದೇನೆ. ಆದರೆ ಇಬ್ಬರೂ ನನ್ನ ಬೆನ್ನಿಗೆ ಚೂರಿ ಹಾಕಿದರು ಎಂದು ಹೇಳಿದರು
ಅವರು ತಲೆಕೆಳಗಾದರೂ 60 ಸ್ಥಾನ ಗಿಟ್ಟೋಲ್ಲ:
ನನ್ನ ಜೀವನದಲ್ಲಿ ರಾಜಕೀಯ ಲೆಕ್ಕಾಚಾರ ಎಂದೂ ತಪ್ಪಾಗಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ತಲೆಕೆಳಗಾಗಿ ನಿಂತರೂ 60 ಸ್ಥಾನವೂ ಸಿಗೋಲ್ಲ. ಕೆಜೆಪಿ ಸಹಾಯವಿಲ್ಲದೆ ರಾಜ್ಯದಲ್ಲಿ ಯಾರೂ ಸರ್ಕಾರ ರಚಿಸಲು ಸಾಧ್ಯವಾಗದು ಎಂದೂ ಯಡಿಯೂರಪ್ಪ ಅತೀವ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾ, ಭವಿಷ್ಯ ನುಡಿದಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications