ಸೋಮವಾರ ನಾಮಪತ್ರ ಸಲ್ಲಿಸಲಿರುವ ನಾಯಕರು
ಬೆಂಗಳೂರು, ಏ.10: ಚುನಾವಣೆ ಅಧಿಸೂಚನೆ ಪ್ರಕಟವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ನಾಯಕರು ನಾಮಪತ್ರ ಸಲ್ಲಿಸಲು ಪ್ರಶಸ್ತವಾದ ದಿನಗಳನ್ನು ಹುಡುಕಿಕೊಡಲು ಜ್ಯೋತಿಷಿಗಳ ಮನೆ ಬಾಗಿಲು ತಟ್ಟುತ್ತಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಸೋಮವಾರ ನಾಮಪತ್ರ ಸಲ್ಲಿಸಲು ಮುಹೂರ್ತ ಫಿಕ್ಸ್ ಮಾಡಿಕೊಂಡಿದ್ದಾರೆ.
ಯುಗಾದಿ ಕಳೆದು ಹೊಸ ಸಂವತ್ಸರ ಬಂದ ನಂತರ ಸೋಮವಾರ ಅಂದರೆ ಏ.15ರಂದು ರಾಜ್ಯದ ಘಟಾನುಘಟಿ ರಾಜಕಾಣಿಗಳು ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ಜ್ಯೋತಿಷಿಗಳ ಪ್ರಕಾರ ಸೋಮವಾರ ಪಂಚಮಿ, ಮೃಗಶಿರಾ ನಕ್ಷತ್ರ ಇಂದು ಒಳ್ಳೆಯ ಕಾರ್ಯಗಳನ್ನು ಆರಂಭಿಸಿದರೆ ವಿಜಯ ಖಂಡಿತ.
ಆದ್ದರಿಂದಲೇ ವಿವಿಧ ಪಕ್ಷಗಳ ಪ್ರಮುಖರು ತಮ್ಮ ನೆಚ್ಚಿನ ಜ್ಯೋತಿಷಿಗಳನ್ನು ಹುಡುಕಿ ಸೋಮವಾರ ನಾಮಪತ್ರ ಸಲ್ಲಿಸಬಹುದೇ ಎಂದು ವಿಚಾರಿಸಿಕೊಂಡು ಬಂದಿದ್ದಾರೆ. ಸೋಮವಾರ ಪ್ರಶಸ್ತದಿನವಾದ್ದರಿಂದ ಅಂದು ನಾಮಪತ್ರ ಸಲ್ಲಿಸಲು ಜ್ಯೋತಿಷಿಗಳು ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಸೋಮವಾರ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ದಂಪತಿ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್, ಬಿಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಶ್ರೀರಾಮುಲು, ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯಾ ನಾಮಪತ್ರ ಸಲ್ಲಿಸಲು ತಯಾರಾಗಿದ್ದಾರೆ.

ಬಿ.ಎಸ್.ಯಡಿಯೂರಪ್ಪ
ಅಪಾರ ದೈವಭಕ್ತಿ ಉಳ್ಳ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ತೊರೆದು ಮೊದಲ ಬಾರಿ ಚುನಾವಣೆ ಎದುರಿಸುತ್ತಿದ್ದಾರೆ. ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಲಿರುವ ಅವರು ಸೋಮವಾರ ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ
ಸಂಸದರಾಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಂದೆ ದೇವೇಗೌಡರ ಆಜ್ಞೆಯಂತೆ ಸೋಮವಾರ ರಾಮನಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ. ದೇವೇಗೌಡರು ಈಗಾಗಲೇ ಜ್ಯೋತಿಷಿಗಳನ್ನು ಭೇಟಿ ಮಾಡಿ ನಾಮಪತ್ರ ಸಲ್ಲಿಕೆಗೆ ಮುಹೂರ್ತ ಕೇಳಿಕೊಂಡು ಬಂದಿದ್ದಾರೆ.

ಅನಿತಾ ಕುಮಾರಸ್ವಾಮಿ
ಹಾಲಿ ಮಧುಗಿರಿ ಕ್ಷೇತ್ರದ ಶಾಸಕಿಯಾದ ಅನಿತಾ ಕುಮಾರಸ್ವಾಮಿ ಚನ್ನಪಟ್ಟಣದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇವರಿಗೂ ಮಾವ ದೇವೇಗೌಡರೇ ಸೋಮವಾರ ನಾಮಪತ್ರ ಸಲ್ಲಿಸುವಂತೆ ಆಜ್ಞೆ ಹೊರಡಿಸಿದ್ದಾರೆ. ಆದ್ದರಿಂದ ದಂಪತಿಗಳಿಬ್ಬರು ಒಂದೇ ದಿನ ನಾಮಪತ್ರ ಸಲ್ಲಿಸಲಿದ್ದಾರೆ.

ಡಿ.ಕೆ.ಶಿವಕುಮಾರ್
ಕನಕಪುರ ಕ್ಷೇತ್ರದ ಹಾಲಿ ಶಾಸಕ, ಪ್ರಭಾವಿ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಸಹ ಸೋಮವಾರ ನಾಮಪತ್ರ ಸಲ್ಲಿಸಲಿ ತಯಾರಿ ನಡೆಸಿದ್ದಾರೆ. ಚುನಾವಣೆಯಲ್ಲಿ ಪಕ್ಷಕ್ಕೆ ಜಯ ತಂದುಕೊಡುವ ಜೊತೆಗೆ ತಾನು ಗೆಲ್ಲುವಂತೆ ಮಾಡು ಎಂದು ದೇವರನ್ನು ಪ್ರಾರ್ಥಿಸಿ ಮುಹೂರ್ತ ನಿಗದಿಮಾಡಿಕೊಂಡಿದ್ದಾರೆ.

ಬಿ.ಶ್ರೀರಾಮುಲು
ಬಿಎಸ್ಆರ್ ಕಾಂಗ್ರೆಸ್ ಪಕ್ಷ ಕಟ್ಟಿ ಮೊದಲ ಚುನಾವಣೆ ಎದುರಿಸುತ್ತಿರುವ ಮಾಜಿ ಸಚಿವ ಬಿ.ಶ್ರೀರಾಮುಲು ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಅಖಾಡಕ್ಕೆ ಧುಮುಕುತ್ತಿದ್ದಾರೆ. ಸೋಮವಾರವೇ ಪ್ರಶಸ್ತವಾದ ದಿನ ಎಂದು ಶ್ರೀರಾಮುಲು ಅಂದು ನಾಮಪತ್ರ ಸಲ್ಲಿಸುತ್ತಿದ್ದಾರೆ.

ಪಿ.ಜಿ.ಆರ್ ಸಿಂಧ್ಯಾ
ಮಾಜಿ ಸಚಿವ ಜೆಡಿಎಸ್ ಮುಖಂಡ ಪಿ.ಜಿ.ಆರ್.ಸಿಂಧ್ಯಾ ಕನಕಪುರ ಕ್ಷೇತ್ರದಿಂದ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ರಾಜಕೀಯ ಕಡು ವೈರಿಗಳಾದ ಡಿ.ಕೆ.ಶಿವಕುಮಾರ್ ಮತ್ತು ಸಿಂಧ್ಯಾ ಒಂದೇ ಕ್ಷೇತ್ರದಿಂದ ಒಂದೇ ದಿನ ನಾಮಪತ್ರ ಸಲ್ಲಿಸುತ್ತಿದ್ದಾರೆ.












Click it and Unblock the Notifications