ರಾಜಾಜಿನಗರ : ಬಿಎ ವಿದ್ಯಾರ್ಥಿ ಚುನಾವಣಾ ಅಖಾಡಕ್ಕೆ

ರಾಜಾಜಿನಗರದ ಕೆಎಲ್ಇ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ ಓದುತ್ತಿರುವ ರಕ್ಷಿತ್ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ರಾಜಕೀಯ ಪಕ್ಷಗಳು ಯುವಕರಿಗೆ ಆದ್ಯತೆ ನೀಡುತ್ತಿಲ್ಲ ಆದ್ದರಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ರಕ್ಷಿತ್ ಹೇಳಿದ್ದಾರೆ.
ಡಾಕ್ಟರ್, ವಿಜ್ಞಾನಿ, ಸಾಹಿತಿ ಮುಂತಾದವರಿಗೆ ಪಕ್ಷಗಳು ಟಿಕೆಟ್ ನೀಡುವುದಿಲ್ಲ. ಅದರಂತೆ ಯುವಕರನ್ನು ಪಕ್ಷಗಳು ಕಡೆಗಣಿಸುತ್ತವೆ. ರಾಜಕೀಯಕ್ಕೆ ಯುವಕರು ಬರಬೇಕು ಎಂಬ ನಾಯಕರು ತಮ್ಮ ಪುತ್ರರಿಗೆ ಮಾತ್ರ ಟಿಕೆಟ್ ನೀಡುತ್ತಾರೆ ಎಂದು ರಕ್ಷಿತ್ ಆರೋಪಿಸುತ್ತಿದ್ದಾನೆ.
ಚುನಾನವಣೆಯಲ್ಲಿ ಹಣ, ಹೆಂಡ ಮಾತ್ರ ಮಾನದಂಡವಲ್ಲ ಎಂದು ಯುವಜನರಿಗೆ ತಿಳಿಸಬೇಕು ಆದ್ದರಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ರಕ್ಷಿತ್ ತಿಳಿಸಿದ್ದಾರೆ. ತಮ್ಮ ವಿರುದ್ಧ ಇಬ್ಬರು ಸಚಿವರು ಸ್ಪರ್ಧೆಗೆ ನಿಂತಿದ್ದರೂ ಯಾವುದೇ ಅಂಜಿಕೆ ಇಲ್ಲದೆ ಚುನಾವಣೆ ಎದುರಿಸುವುದಾಗಿ ರಕ್ಷಿತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸ್ನೇಹಿತರ ಸಾಥ್ : ಕೆಎಲ್ಇ ಮಾತ್ರವಲ್ಲದೇ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ರಕ್ಷಿತ್ ಬೆಂಬಲಕ್ಕೆ ನಿಂತು ಆತನೊಂದಿಗೆ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ.
ಕರಪತ್ರ ಹಂಚುವುದು, ಭಿತ್ತಿ ಪತ್ರ ಅಂಟಿಸುವುದು, ಮನೆ-ಮನೆ ಭೇಟಿ ಮುಂತಾದ ಕಾರ್ಯಕ್ರಮಗಳ ಮೂಲಕ ಕ್ಷೇತ್ರದಲ್ಲಿ ಪ್ರಚಾರ ಮಾಡುವ ಯೋಜನೆಯನ್ನು ರಕ್ಷಿತ್ ಮತ್ತು ಸ್ನೇಹಿತರು ಸೇರಿ ರೂಪಿಸಿದ್ದಾರೆ.
ಮನೆಯಲ್ಲೂ ಗ್ರೀನ್ ಸಿಗ್ನಲ್ : ರಕ್ಷಿತ್ ತಂದೆ-ತಾಯಿ ಮಗನ ಸ್ಪರ್ಧೆಗೆ ಮೊದಲು ಹಿಂದೇಟು ಹಾಕಿದರೂ ಸ್ನೇಹಿತರು ನೀಡುತ್ತಿರುವ ಬೆಂಬಲ ನೋಡಿ ಚುನಾವಣೆಗೆ ಸ್ಪರ್ಧಿಸಲು ಒಪ್ಪಿಗೆ ನೀಡಿದ್ದಾರೆ. (ರಾಜಾಜಿನಗರ ಕ್ಷೇತ್ರ ಪರಿಚಯ)
ಸ್ಟಾರ್ ಕ್ಷೇತ್ರ : ರಾಜಾಜಿನಗರ ಈ ಬಾರಿಯ ಚುನಾವಣೆಯ ಸ್ಟಾರ್ ಕ್ಷೇತ್ರ ಎಂಬುವುದರಲ್ಲಿ ಸಂಶಯವಿಲ್ಲ. ಸಚಿವ ಸುರೇಶ್ ಕುಮಾರ್ ಬಿಜೆಪಿ ಅಭ್ಯರ್ಥಿಯಾದರೆ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಕೆಜೆಪಿ ಅಭ್ಯರ್ಥಿ. ಉಭಯ ನಾಯಕರ ವಿರುದ್ಧ ಸ್ಪರ್ಧಿಸಲು ವಿದ್ಯಾರ್ಥಿಯೊಬ್ಬ ಸಜ್ಜಾಗಿದ್ದಾನೆ. ಸೋಲು-ಗೆಲುವಿನ ಪ್ರಶ್ನೆ ಬದಿಗೊತ್ತಿ ಯುವಕನಿಗೆ ನಿಮ್ಮ ಕಡೆಯಿಂದಲೂ ಆಲ್ ದಿ ಬೆಸ್ಟ್ ಹೇಳಿ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications