ಕನಕಪುರದಲ್ಲಿ ಡಿಕೆಶಿ ತೆಕ್ಕೆಗೆ ಅನ್ಯಪಕ್ಷದ ಮುಖಂಡರು

ಇಲ್ಲಿನ ರೋಟರಿಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಶಿವಕುಮಾರ್ ಅವರ ಸಮ್ಮುಖದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಬಲಿಜ ಮಹಿಳಾ ಸಂಘದ ಸದಸ್ಯರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಬಿಜೆಪಿಯ ಕಿಟ್ಟಿ(ಕೃಷ್ಣಮೂರ್ತಿ), ನರಸಿಂಹಮೂರ್ತಿ, ನಾಗರಾಜು, ಸೀತಾರಾಮು, ಮಾಂಗೀಲಾಲ್, ರೋಹಿಣಿಪಾಲ್, ಬಲಿಜ ಮಹಿಳಾ ಸಂಘದ ಅಧ್ಯಕ್ಷೆ ರತ್ನನಾಗರಾಜು, ಪ್ರಧಾನ ಕಾರ್ಯದರ್ಶಿ ಅಂಬಿಕಾ, ಪದಾಧಿಕಾರಿಗಳಾದ ರೇಖಾ, ವರಲಕ್ಷ್ಮಿ, ಪವಿತ್ರ, ಅಶ್ವಿನಿ ಮೊದಲಾದವರು ಕಾಂಗ್ರೆಸ್ ಗೆ ಸೇರ್ಪಡೆಗೊಂಡವರು.
ಸೋಲಿನ ಭೀತಿಯಿಂದ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ತಮ್ಮ ವಿರುದ್ಧ ಅಪಪ್ರಚಾರ ನಡೆಸಿದ್ದಾರೆ, ಕಾಣಿಕೆಗಳನ್ನು ಹಂಚುತ್ತಿದ್ದೇನೆ ಎಂದು ಆರೋಪಿಸಿದ್ದಾರೆ. ಚುನಾವಣೆ ಘೋಷಣೆಯಾದ ಮೇಲೆ ತಾವು ಯಾವುದೇ ಬೃಹತ್ ಕಾರ್ಯಕ್ರಮ ನಡೆಸಿಲ್ಲ. ಹಬ್ಬದ ಹೆಸರಿನಲ್ಲಿ ಮನೆಗಳಿಗೆ ದಿನಸಿ ಹಂಚುತ್ತಾ ತಿರುಗುತ್ತಿರುವ, ಸುಳ್ಳುಗಾರರೆಂದೇ ಹೆಸರಾಗಿರುವ ಸಿಂಧ್ಯಾರವರು ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಜಿದ್ಧಿನಿಂದ ರಾಜಕೀಯ ನಡೆಸುತ್ತಿದ್ದಾರೆ ಎಂದು ಶಿವಕುಮಾರ್ ಟೀಕಿಸಿದರು.
ಮುಖಂಡರುಗಳಾದ ಡಿ.ಕೆ.ಸುರೇಶ್, ಮಾಜಿ ವಿಪ ಸದಸ್ಯ ಎಸ್.ರವಿ, ಜಿಲ್ಲಾ ಉಪಾಧ್ಯಕ್ಷ ವಿ. ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯದೇವ್, ಕೆ.ಎನ್.ದಿಲೀಪ್, ಮುನಿಯಪ್ಪ, ಜಿಪಂ ಸದಸ್ಯೆ ನಳಿನಾ ರವಿಶಂಕರ್, ವೆಂಕಟೇಶಯ್ಯ, ತಿಗಳರ ಸಂಘದ ಅಧ್ಯಕ್ಷ ವೆಂಕಟೇಶಪ್ಪ, ಸಿ.ವಿಜಯ್, ರಾಮಚಂದ್ರ, ಜೋಸೆಫ್ ಮುಂತಾದವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಚುನಾವಣೆ ಆರಂಭವಾದ ದಿನದಿಂದ ಪಕ್ಷಾಂತರ ಪರ್ವ ಕ್ಷೇತ್ರದಲ್ಲಿ ಬಿರುಸಾಗಿ ನಡೆಯುತ್ತಿದೆ. ಗ್ರಾ.ಪಂ. ಅಧ್ಯಕ್ಷ/ಉಪಾಧ್ಯಕ್ಷರ ಚುನಾವಣೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಗ್ರಾ.ಪಂ. ಸದಸ್ಯರನ್ನು, ಜೆಡಿಎಸ್ ಪಕ್ಷದವರನ್ನು ತನ್ನತ್ತ ಸೆಳೆದುಕೊಂಡು ಹೆಚ್ಚಿನ ಗ್ರಾ.ಪಂ.ಗಳು ಕಾಂಗ್ರೆಸ್ ತೆಕ್ಕೆಗೆ ಬರುವಂತೆ ನೋಡಿಕೊಂಡಿದ್ದರು ಡಿಕೆಶಿ. ಈಗ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರನ್ನು ತಮ್ಮತ್ತ ಸೆಳೆಯಲು ಡಿಕೆಶಿ ಯತ್ನಿಸುತ್ತಿದ್ದಾರೆ.












Click it and Unblock the Notifications