ಕೆಜೆಪಿ ಅಧ್ಯಕ್ಷ ಹುದ್ದೆ : ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಸೋಮವಾರ ಕೆಜೆಪಿ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ಎರಡು ಕಡೆಯ ಅರ್ಜಿದಾರರ ವಾದ ಆಲಿಸಿದ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರನ್ನೊಳಗೊಂಡ ಏಕಸದಸ್ಯ ಪೀಠ ತೀರ್ಪನ್ನು ಕಾಯ್ದರಿಸಿತು.
ವಿವಾದವೇನು : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೆಜೆಪಿ ಅಧ್ಯಕ್ಷ ಏರಿದ್ದಾರೆ. ಆಯೋಗಕ್ಕೂ ನಕಲಿ ದಾಖಲೆಗಳನ್ನು ಸಲ್ಲಿಸಿ ಅಧ್ಯಕ್ಷ ಹುದ್ದೆ ಪಡೆದಿದ್ದಾರೆ. ಆದರೆ, ನಾನು ಕೆಜೆಪಿ ಪಕ್ಷದ ನಿಜವಾದ ಅಧ್ಯಕ್ಷ.
ಆದ್ದರಿಂದ ಯಡಿಯೂರಪ್ಪ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಸಬೇಕು ಮತ್ತು ಈ ಕುರಿತು ಚುನಾವಣಾ ಆಯೋಗಕ್ಕೂ ನಿರ್ದೇಶನ ನೀಡಬೇಕೆಂದು ಕೋರಿ ಕೆಜೆಪಿ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನ ಹೈಕೋರ್ಟ್ ಮೆಟ್ಟಿಲೇರಿದ್ದರು.
ಆಯೋಗದ ಮಾನ್ಯತೆ : ಮಾಜಿ ಸಿಎಂ ಯಡಿಯೂರಪ್ಪ ಮತ್ತು ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ್ ಕುಮಾರ್ ಸಲ್ಲಿಸಿರುವ ಪ್ರಮಾಣ ಪತ್ರದ ಆಧಾರದ ಮೇಲೆ ಕೇಂದ್ರ ಚುನಾವಣಾ ಆಯೋಗ ಯಡಿಯೂರಪ್ಪ ಕೆಜೆಪಿ ಅಧ್ಯಕ್ಷ ಎಂದು ಘೋಷಿಸಿತ್ತು.
ಈ ಆದೇಶ ರದ್ದು ಪಡಿಸಬೇಕೆಂದು ಕೋರಿ ಪದ್ಮನಾಭ ಪ್ರಸನ್ನ ಕೋರ್ಟ್ ಮೆಟ್ಟಿಲೇರಿದ್ದಾರೆ. ನನ್ನ ಅನಾರೋಗ್ಯದ ಹಿನ್ನೆಲೆಯಲ್ಲಿ ಧನಂಜಯ್ ಕುಮಾರ್ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಿದ್ದೆ. ಇದನ್ನು ದುರುಪಯೋಗ ಪಡಿಸಿಕೊಂಡು ಯಡಿಯೂರಪ್ಪ ಮತ್ತು ಧನಂಜಯ್ ಕುಮಾರ್ ನಕಲಿ ದಾಖಲೆ ಸೃಷ್ಟಿಸಿ ಆಯೋಗಕ್ಕೆ ನೀಡಿದ್ದಾರೆ.
ಇಂದಿಗೂ ನಾನು ಕೆಜೆಪಿ ಅಧ್ಯಕ್ಷ ಆದ್ದರಿಂದ ಯಡಿಯೂರಪ್ಪ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು, ಕೇಂದ್ರ ಚುನಾವಣಾ ಆಯೋಗಕ್ಕೂ ಈ ಕುರಿತು ನಿರ್ದೇಶನ ನೀಡಬೇಕು ಎಂಬುದು ಪ್ರಸನ್ನ ಕುಮಾರ್ ಮನವಿ.
ಚುನಾವಣೆ ಹತ್ತಿರವಾಗುತ್ತಿರುವಾಗ ಹೈಕೋರ್ಟ್ ತನ್ನ ಆದೇಶ ಕಾಯ್ದಿರಿಸಿದೆ. ನ್ಯಾಯಾಲಯದ ತೀರ್ಪಿನ ನಂತರ ಯಡಿಯೂರಪ್ಪ ಅವರ ಅಧ್ಯಕ್ಷ ಹುದ್ದೆ ಉಳಿಯುವುದೋ? ಹೋಗುವುದೋ ? ಎಂದು ತೀರ್ಮಾನವಾಗಲಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications