ತೆನೆ ಇಳಿಸಿ, ಕಮಲ ಪಕ್ಷ ಸೇರಿದ ದತ್ತಾತ್ರೇಯ

ಮಂಗಳವಾರ ಬೆಳಗ್ಗೆ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ, ದತ್ತಾತ್ತೇಯ ಪಾಟೀಲ್ ಗುಲ್ಬರ್ಗ ಮಹಾನಗರ ಪಾಲಿಕೆಯ 7 ಸದಸ್ಯರೊಂದಿಗೆ ಸಿಎಂ ಜಗದೀಶ್ ಶೆಟ್ಟರ್ ಮತ್ತು ಉಪ ಮುಖ್ಯಮಂತ್ರಿ ಆರ್.ಅಶೋಕ್ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.
ಗುಲ್ಬರ್ಗಾ ದಕ್ಷಿಣ ಕ್ಷೇತ್ರದಿಂದ ಬಿಜೆಪಿ ದತ್ತಾತ್ರೇಯ ಪಾಟೀಲ್ ಅವರನ್ನು ತನ್ನ ಅಭ್ಯರ್ಥಿ ಎಂದು ಘೋಷಿಸುವ ಸಾಧ್ಯತೆ ಇದೆ. ಗುಲ್ಬರ್ಗಾ ದಕ್ಷಿಣ ಕ್ಷೇತ್ರದ ಹಾಲಿ ಶಾಸಕಿ ಅರುಣಾ ರೇವೂರ ಪಾಟೀಲ್ ಅವರ ಪುತ್ರರಾದ ದತ್ತಾತ್ರೇಯ ಪಾಟೀಲ್ ಜೆಡಿಎಸ್ ಅಭ್ಯರ್ಥಿ ಎಂದು ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದರು.
ಆದರೆ, ಪಕ್ಷದ ಘೋಷಿತ ಅಭ್ಯರ್ಥಿ ಬಿಜೆಪಿ ಸೇರಿರುವುದು ಪಕ್ಷದ ನಾಯಕರಿಗೆ ತೀವ್ರ ಮುಜುಗರ ಉಂಟುಮಾಡಿದೆ. ಕ್ಷೇತ್ರದ ಹಾಲಿ ಜೆಡಿಎಸ್ ಶಾಸಕಿ ಅರುಣಾ ರೇವೂರು ಪಾಟೀಲ್ ಸಹ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳಿತ್ತು. ಆದರೆ, ಅವರು ಗುಲ್ಬರ್ಗಾದಲ್ಲಿ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಅವರ ಪುತ್ರ ದತ್ತಾತ್ರೇಯ ತಿಳಿಸಿದ್ದಾರೆ.
ಪಕ್ಷ ಸೇರ್ಪಡೆಗೆ ವಿರೋಧ : ಶ್ರೀಮತಿ ಅರುಣಾ ಪಾಟೀಲ್ ಮತ್ತು ಅವರ ಪುತ್ರ ದತ್ತಾತ್ರೇಯ ಸೇರ್ಪಡೆಗೆ ಸ್ಥಳೀಯ ಬಿಜೆಪಿ ಮುಖಂಡ ಶಶಿ ನಮೋಶಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕರ ಚಿತ್ರಗಳಿಗೆ ಚಪ್ಪಲಿ ಹಾರ ಹಾಕಿದ್ದ ಇವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡಿರುವುದು ಸರಿಯಲ್ಲ ಎಂದು ರಾಜ್ಯ ನಾಯಕರ ವಿರುದ್ಧ ಗುಡುಗಿದ್ದಾರೆ.
ಶಶಿ ನಮೋಶಿ ಗುಲ್ಬರ್ಗಾ ದಕ್ಷಿಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ದತ್ತಾತ್ರೇಯ ಅವರ ಸೇರ್ಪಡೆಯಿಂದ ಅವರಿಗೆ ತೀವ್ರ ಹಿನ್ನೆಡೆ ಉಂಟಾಗಿದೆ. ಗುಲ್ಬರ್ಗಾ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ 3,672 ಮತಗಳ ಅಂತರದಿಂದ ಬಿಜೆಪಿಯ ಶಶಿಲ್ ನಮೋಶಿ ಅವರನ್ನು ಸೋಲಿಸಿ ಅರುಣಾ ಪಾಟೀಲ್ ರೇವೂರ್ ಅವರು ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿದ್ದರು.
ದತ್ತಾತ್ರೇಯ ಮತ್ತು ಅರುಣಾ ಪಾಟೀಲ್ ಸೇರ್ಪಡೆಯಿಂದ ಬಿಜೆಪಿಯಲ್ಲಿ ಅಸಮಾಧಾನದ ಬುಗಿಲೇಳುವ ಸಾಧ್ಯತೆ ಇದೆ. ಇತ್ತ ದತ್ತಾತ್ರೇಯ ಅವರಿಗೆ ಟಿಕೆಟ್ ನೀಡುವುದೋ? ಅಥವ ಉಪ ಚುನಾವಣೆಯಲ್ಲಿ ಸೋತ ಶಶಿ ನಮೋಶಿಗೆ ಟಿಕೆಟ್ ನೀಡುವುದೋ ಎಂಬ ಗೊಂದಲಕ್ಕೆ ಬಿಜೆಪಿ ಸಿಲುಕಿದೆ.
ಚುಣಾವಣೆ ಅಧಿಸೂಚನೆ ಪ್ರಕಟಗೊಳ್ಳಲು ಒಂದು ದಿನ ಬಾಕಿ ಉಳಿದಿರುವಂತೆಯೇ ಹಲವಾರು ರಾಜಕೀಯ ಬದಲಾವಣೆಗಳು ನಡೆಯುತ್ತಿವೆ. ಬಿಜೆಪಿ ತೊರೆಯುವವರ ಸಂಖ್ಯೆಯೇ ಜಾಸ್ತಿಯಾಗಿರುವ ಹೊತ್ತಿನಲ್ಲಿ ಬಿಜೆಪಿಗೆ ಸೇರ್ಪಡೆ ಆಗುತ್ತಿರುವ ಆಕಾಂಕ್ಷಿಗಳನ್ನು ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications