ಐದು ಮರಾಠಿ ಶಾಸಕರು ಗೆದ್ದರೆ ಕರ್ನಾಟಕ ನಮ್ಮ ಕಾಲಬಳಿಯಲ್ಲಿ
ಬೆಳಗಾವಿ, ಏ 8 : ಚುನಾವಣಾ ನೀತಿ ಸಂಹಿತೆಯನ್ನು ಗಾಳಿಗೆ ತೂರಿ ಮರಾಠಿ ಮುಖಂಡ ಕನ್ನಡಿಗರ ವಿರುದ್ದ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ಐದರಿಂದ ಏಳು ಮರಾಠಿ ಶಾಸಕರನ್ನು (ಎಂಇಎಸ್) ಅಸೆಂಬ್ಲಿ ಚುನಾವಣೆಯಲ್ಲಿ ಗೆಲ್ಲಿಸಿ ಕರ್ನಾಟಕ ಸರಕಾರವನ್ನು ಥಕಥೈ ಎಂದು ಕುಣಿಸೋಣ.
ಐದು ಶಾಸಕರು ಗೆದ್ದರೆ ಕರ್ನಾಟಕ ಸರಕಾರ ನಮ್ಮ ಕೈಗೊಂಬೆಯಾಗಾಲಿದೆ ಮತ್ತು ಕರ್ನಾಟಕ ನಮ್ಮ ಕಾಲಬಳಿಯಲ್ಲಿ ಬರಲಿದೆ. ನಾವು ಸುಮ್ಮನಿದ್ದರೆ ಕರ್ನಾಟಕ ಸರಕಾರ ಮತ್ತು ಕನ್ನಡಿಗರು ನಮ್ಮನ್ನು ತುಳಿದು ಹಾಕುತ್ತಾರೆಂದು ಮಹಾರಾಷ್ಟ್ರದ ಗೃಹ ಸಚಿವ ಆರ್ ಆರ್ ಪಾಟೀಲ್ ಕನ್ನಡದ ನೆಲದಲ್ಲಿ ಕರ್ನಾಟಕದ ವಿರುದ್ದ ಮತ್ತೊಮ್ಮೆ ಕಿಡಿಕಾರಿದ್ದಾರೆ.
ನಗರದ ಸಂಭಾಜಿ ಪಾರ್ಕಿನಲ್ಲಿ ಮರಾಠಿ ಪತ್ರಿಕೆಯೊಂದರ ಬಿಡುಗಡೆ ಮತ್ತು ಕಿರಣ್ ಠಾಕೂರ್ ಜನ್ಮ ದಿನಾಚರಣೆಯ ಖಾಸಾಗಿ ಸಮಾರಂಭದಲ್ಲಿ ಮಾತನಾಡುತ್ತಿದ್ದ ಪಾಟೀಲ್, ನಾವು ಸುಮ್ಮನಿದ್ದರೆ ನಮ್ಮನ್ನು ಕೈಲಾಗದವರೆಂದು ತಿಳಿದುಕೊಳ್ಳುವುದು ಬೇಡ. ನಾವು ಕೈಗೆ ಖಡ್ಗ (ತಲವಾರ್) ವನ್ನು ತೆಗೆದುಕೊಂಡು ಆಖಾಡಕ್ಕೆ ಇಳಿಯುವಂತೆ ಮಾಡಬೇಡಿ.
ನಮ್ಮವರು ಒಗ್ಗಟ್ಟಾಗಿ ಈ ಬಾರಿ ಮರಾಠಿ ಶಾಸಕರನ್ನು ಗೆಲ್ಲಿಸಬೇಕು. ನಮ್ಮ ಶಾಸಕರು ಗೆದ್ದರೆ ಮಾತ್ರ ಬೆಂಗಳೂರಿನಲ್ಲಿ ನಾವು ಹೇಳಿದಂತೆ ಸರಕಾರವನ್ನು ಕುಣಿಸಬಹುದು. ಈ ಅವಕಾಶವನ್ನು ಮರಾಠಿಗರು ಕಳೆದುಕೊಳ್ಳಬಾರದು ಎಂದು ಪಾಟೀಲ್ ಚುನಾವಣೆಯ ಹೊಸ್ತಿಲಲ್ಲಿ ಎರಡು ಭಾಷಿಕರ ನಡುವೆ ತಂದಿಡುವ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರ ಮತ್ತು ಎಂಇಎಸ್ ಮುಖಂಡರು ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ರೀತಿಯ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವುದು ಹೊಸದೇನಲ್ಲ. ಕೆಲವೊಂದು ಸ್ಯಾಂಪಲ್

ಮರಾಠಿ ಮುಖಂಡರ ಹೇಳಿಕೆ
ಮಹಾಜನ್ ಆಯೋಗ ಮರಾಠಿಗರಿಗೆ ಅನ್ಯಾಯ ಮಾಡಿದೆ. ಗಡಿ ತಂಟೆಯ ಸಮಸ್ಯೆ ಬಿಡಿಸಲು ಚಳವಳಿ ಇನ್ನಷ್ಟು ತೀವ್ರಗೊಳಿಸಲಾಗುವುದು.ಮರಾಠಿಗರಿಗೆ ಅನ್ಯಾಯವಾದರೆ ಸಹಿಸಲು ಸಾಧ್ಯವಿಲ್ಲ. ಅಂಥ ಪ್ರಸಂಗ ಎದುರಾದರೆ ರಕ್ತ ಹರಿಸಲೂ ಸಿದ್ಧ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಛಗನ್ ಭುಜಬಲ್ ಕರ್ನಾಟಕಕ್ಕೆ ಸವಾಲು ಹಾಕಿದ್ದರು.

ಮರಾಠಿ ಮುಖಂಡರ ಹೇಳಿಕೆ
ಗಡಿ ಸಮಸ್ಯೆಯನ್ನು ಶೀಘ್ರದಲ್ಲಿಯೇ ಬಗೆಹರಿಸಬೇಕು. ಸುಪ್ರೀಂ ಕೋರ್ಟ್‌ನಿಂದ ಇತ್ಯರ್ಥ ಆಗುವವರೆಗೆ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು. ಗಡಿಯಲ್ಲಿರುವ 865 ಮರಾಠಿ ಭಾಷಿಕರ ಗ್ರಾಮಗಳನ್ನು ಮಹಾರಾಷ್ಟ್ರ ಸರ್ಕಾರ ದತ್ತು ತೆಗೆದುಕೊಳ್ಳಬೇಕು ಎಂದು ಶಿವಸೇನೆ ಮುಖಂಡ ಮನೋಜ ಪಾವಶೆ ಹೇಳಿಕೆ ನೀಡಿದ್ದರು.

ಮರಾಠಿ ಮುಖಂಡರ ಹೇಳಿಕೆ
ಕರ್ನಾಟಕ ಸರಕಾರ ಗಡಿ ಭಾಗದ 25 ಲಕ್ಷ ಮರಾಠಿರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು ಮಹಾರಾಷ್ಟ್ರ ಸರಕಾರ ಕೂಡ ಈ ಅನ್ಯಾಯದ ವಿರುದ್ದ ಧ್ವನಿ ಎತ್ತುತ್ತಿಲ್ಲ ಎಂದು ಬೆಳಗಾವಿಯ ಲೆಲೆ ಮೈದಾನದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸಮಾಜ ಸೇವಕ ಅವಿನಾಶ ಧರ್ಮಾಧಿಕಾರಿ ಕಿಡಿಕಾರಿದ್ದರು.

ಮರಾಠಿ ಮುಖಂಡರ ಹೇಳಿಕೆ
ಬೆಳಗಾವಿ ಏನಿದ್ದರೂ ಮರಾಠಿಗರದ್ದೇ. ಕರ್ನಾಟಕ ಸರಕಾರಕ್ಕೆ ತಾಕತ್ತಿದ್ದರೆ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಲಿ ಎಂದು ಬೆಳಗಾವಿ ಮೇಯರ್ ಆಗಿದ್ದ ಬಾಳೆ ಕುಂದ್ರೆ ಅಂದಿನ ಸಿಎಂ ಸದಾನಂದ ಗೌಡ ಅವರಿಗೆ ಸವಾಲು ಹಾಕಿದ್ದರು.

ಮರಾಠಿ ಮುಖಂಡರ ಹೇಳಿಕೆ
ಬೆಳಗಾವಿ, ಕಾರವಾರ, ಬೀದರ್, ಭಾಲ್ಕಿ ಮತ್ತು ನಿಪ್ಪಾಣಿ ಸೇರಿದಂತೆ ಮರಾಠಿ ಭಾಷಿಕರು ಇರುವ ಕರ್ನಾಟಕದ 865 ಊರುಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳಿಸಬೇಕು.ಕರ್ನಾಟಕ ಸರ್ಕಾರ ಮರಾಠಿ ಭಾಷಿಗರ ಮೇಲೆ ದೌರ್ಜನ್ಯ ಎಸುಗುತ್ತಿದೆ. ಮರಾಠಿ ಭಾಷೆ ಮತ್ತು ಸಂಸ್ಕೃತಿಯ ಅಳಿವಿಗಾಗಿ ಸಂಚು ನಡೆಸಿದೆ ಎಂದು ಎಂಇಎಸ್ ಮುಖಂಡ ಟಿ ಕೆ ಪಾಟೀಲ ಹೇಳಿಕೆ ನೀಡಿದ್ದರು.












Click it and Unblock the Notifications