ಕೆಜೆಪಿ ಕಿಂಗ್ ಮೇಕರ್ : ಯಡಿಯೂರಪ್ಪ

ಶಿರಾಳಕೊಪ್ಪದಲ್ಲಿ ಪ್ರಚಾರ ಕಾರ್ಯ ನಡೆಸಿ ಮಾತನಾಡಿದ ಯಡಿಯೂರಪ್ಪ, ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿ ಕಿಂಗ್ ಮೇಕರ್ ಆಗುವುದು ಖಚಿತವಾಗಿದೆ. ಮತದಾರು ಪಕ್ಷದ ಮೇಲೆ ನಂಬಿಕೆ ಇಟ್ಟು ಮತ ನೀಡಲಿದ್ದಾರೆ. ಕೆಜೆಪಿ ಮತ್ತು ಯಡಿಯೂರಪ್ಪ ಹೊರತಾಗಿ ಯಾವ ಪಕ್ಷವೂ ಸರ್ಕಾರ ರಚಿಸುವುದು ಅಸಾಧ್ಯ ಎಂದರು.
ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ಅವರು ಮಾಡಿರುವ ಕೆಲಸಗಳನ್ನು ಜನರು ಮರೆತಿಲ್ಲ. ಬಿಜೆಪಿ ಸರ್ಕಾರದ ಇಂದಿನ ಮುಖ್ಯಮಂತ್ರಿಗಳು ಎಂತಹ ಕೆಲಸ ಮಾಡುತ್ತಿದ್ದಾರೆ ಎಂದು ಜನರಿಗೆ ತಿಳಿದಿದೆ, ನಾನು ಜಾರಿಗೆ ತಂದ ಯೋಜನೆಗಳನ್ನು ತಮ್ಮ ಸಾಧನೆ ಎಂದು ಬಿಜೆಪಿ ಬಿಂಬಿಸುತ್ತಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ಪಕ್ಷದ ಭವಿಷ್ಯ ಏನೆಂದು ಚುನಾವಣೆ ನಂತರ ಜನರಿಗೆ ತಿಳಿಯಲಿದೆ. ಈಗಾಗಲೇ ನಾಯಕರ ಕೊರತೆ ಎದುರಿಸುತ್ತಿರುವ ಬಿಜೆಪಿ ಮುಂದಿನ ಚುನಾವಣೆ ನಂತರ ಅಸ್ತಿತ್ವ ಕಳೆದುಕೊಳ್ಳಲಿದೆ. ನಮ್ಮದು ಕುಟುಂಬ ರಾಜಕಾರಣ ಎಂದು ಟೀಕಿಸುವ ಬಿಜೆಪಿ ನಾಯಕರು ಹುಬ್ಬಳ್ಳಿ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.
ರಾಜ್ಯದ ಅಭಿವೃದ್ಧಿಗೆ ಜೊತೆಗೆ ಶಿವಮೊಗ್ಗ ಜಿಲ್ಲೆ ಮತ್ತು ಶಿಕಾರಿಪುರದಲ್ಲಿ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಕೆಜೆಪಿಗೆ ಮತ ನೀಡಿ ಎಂದ ಅವರು, ತಾಲೂಕಿನ ಜನರ ಮೇಲೆ ನನಗೆ ಅಪಾರ ವಿಶ್ವಾಸವಿದೆ. ಯಾರ ಅಪಪ್ರಚಾರಕ್ಕೂ ಕಿವಿಗೊಡದೆ ಹೆಚ್ಚಿನ ಅಂತರದಲ್ಲಿ ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಮಹಾಲಿಂಗಪ್ಪಗೆ ಆಹ್ವಾನ : ಮಾಜಿ ಶಾಸಕ ಶಿರಾಳಕೊಪ್ಪದ ಮಹಾಲಿಂಗಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಯಡಿಯೂರಪ್ಪ, ಪಕ್ಷಕ್ಕೆ ಬರುವಂತೆ ಅವರಿಗೆ ಆಹ್ವಾನ ನೀಡಿದರು. ಪ್ರಸ್ತುತ ನಾನು ಕಾಂಗ್ರೆಸ್ಸಿನಲ್ಲಿದ್ದು ಪಕ್ಷದ ಪರವಾಗಿಯೇ ಕೆಲಸ ಮಾಡುತ್ತೇನೆ ಎಂದು ಈ ಸಂದರ್ಭದಲ್ಲಿ ಮಹಾಲಿಂಗಪ್ಪ ಸ್ಪಷ್ಟ ಪಡಿಸಿದರು.
ಏಪ್ರಿಲ್ ಮೊದಲವಾರ ಪಟ್ಟಿ : ಕೆಜೆಪಿಯ ಉನ್ನತ ಮಟ್ಟದ ಸಭೆ ಮಾ.30ರಂದು ನಡೆಯಲಿದೆ ಏಪ್ರಿಲ್ 5ರೊಳಗೆ ಕೆಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು. ಕೆಜೆಪಿ ಸೇರಲಿರುವ ಬಿಜೆಪಿ ಸಚಿವರು, ಎರಡು ದಿನದಲ್ಲಿ ಪಕ್ಷ ಸೇರಲಿದ್ದಾರೆ ಎಂದು ತಿಳಿಸಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications