ರಾಷ್ಟ್ರೀಯ ರಾಜಕಾರಣಕ್ಕೆ ತೆರಳಲು ಗೌಡರು ಸಜ್ಜು

ಬಿಜೆಪಿ ರಾಷ್ಟ್ರೀಯ ನಾಯಕರು ಸದಾನಂದಗೌಡರನ್ನು ಸಿಎಂ ಖುರ್ಚಿಯಿಂದ ಇಳಿಸುವಾಗ ನೀಡಿದ್ದ ವಾಗ್ದಾನ ಈಡೇರಿಸಲು ಈಗ ಸಜ್ಜಾಗಿದ್ದಾರೆ. ಪಕ್ಷದ ಮೂಲಗಳ ಮಾಹಿತಿ ಪ್ರಕಾರ ಗೌಡರಿಗೆ ರಾಷ್ಟ್ರೀಯ ಪದಾಧಿಕಾರಿ ಅಥವ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ದೊರೆಯುವುದು ನಿಶ್ಚಿತವಾಗಿದೆ.
ರಾಷ್ಟ್ರ ರಾಜಕಾರಣಕ್ಕೆ ತೆರಳುತ್ತೇನೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸದಾನಂದಗೌಡರು ಹಲವು ಬಾರಿ ಹೇಳಿದ್ದರು. ಆದರೆ, ಇತ್ತೀಚೆಗೆ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಗೌಡರನ್ನು ಪುತ್ತೂರಿನಿಂದ ಕಣಕ್ಕಿಳಿಸುವ ಕುರಿತು ಚರ್ಚೆ ನಡೆದಿತ್ತು. ಸದಾನಂದಗೌಡರ ವಿಧಾನಪರಿಷತ್ ಸದಸ್ಯತ್ವದ ಅವಧಿ ಒಂದು ವರ್ಷ ಬಾಕಿ ಇದೆ. ಅದಕ್ಕೂ ಮೊದಲೇ ಅವರು ತೆರಳಬಹುದು ಎಂದು ತಿಳಿದುಬಂದಿದೆ.
ಆದರೆ, ರಾಷ್ಟ್ರೀಯ ನಾಯಕರು ಈ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿಲ್ಲ ಎಂದು ತಿಳಿದು ಬಂದಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಾಗಲೇ ಅವರಿಗೆ ರಾಷ್ಟ್ರ ರಾಜಕಾರಣಕ್ಕೆ ಮರಳುವಂತೆ ಸೂಚಿಸಿದ್ದ ಹೈ ಕಮಾಂಡ್ ಈಗ ಅವರಿಗೆ ಹುದ್ದೆಯನ್ನು ನಿಗದಿಗೊಳಿಸಿದೆ. ಚುನಾವಣೆಗೂ ಮೊದಲು ಅಥವ ನಂತರ ಅಂತಿಮ ಆದೇಶ ಹೊರಬೀಳಲಿದೆ.
ಎರಡು ಬಾರಿ ಶಾಸಕರಾಗಿ, ಸಂಸದರಾಗಿ, ಪಕ್ಷದ ಅಧ್ಯಕ್ಷರಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಸದಾನಂದಗೌಡರ ಅನುಭವ ಪಕ್ಷಕ್ಕೆ ಅಗತ್ಯವಿದೆ. ರಾಷ್ಟ್ರೀಯ ಮಟ್ಟದಲ್ಲಿ ಅವರು ಪಕ್ಷದ ಹುದ್ದೆ ಅಲಂಕರಿಸಿದರೆ ದೇಶವ್ಯಾಪಿ ಪಕ್ಷ ಸಂಘಟನೆಗೆ ಸಹಾಯಕವಾಗುವುದರಿಂದ ಗೌಡರನ್ನು ರಾಷ್ಟ್ರೀಯ ರಾಜಕಾರಣಕ್ಕೆ ಬರುವಂತೆ ವರಿಷ್ಠರು ಕರೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಭಷ್ಟರು ಬೆಜೆಪಿ ಬಿಡುತ್ತಿದ್ದಾರೆ :ರಾಷ್ಟ್ರ ರಾಜಕಾರಣಕ್ಕೆ ತೆರಳುವ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಲು ಮಾಜಿ ಸಿಎಂ ಸದಾನಂದಗೌಡರು ನಿರಾಕರಿಸಿದ್ದಾರೆ. ಮಂಗಳೂರಿನಲ್ಲಿ ಗುರವಾರ ಸುದ್ದಿಗಾರರೊಂಗಿಗೆ ಮಾತನಾಡಿದ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಶಾಸಕರ ಪಕ್ಷ ತೊರೆಯುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು ಭ್ರಷ್ಟರು ಬಿಜೆಪಿ ಬಿಟ್ಟು ಬೇರೆ ಪಕ್ಷ ಸೇರುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಬದಲಾಗಿ ಬಿಜೆಪಿ ಮತ್ತಷ್ಟು ಬಲಗೊಳ್ಳುತ್ತದೆ ಎಂದು ಹೇಳಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications