ಪ್ರಹ್ಲಾದ್ ನನ್ನ ಕೈಗೊಂಬೆ ಅಲ್ಲ: ಅನಂತ ಕುಮಾರ
ಹಾವೇರಿ, ಮಾ.25 : ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪ್ರಹ್ಲಾದ್ ಜೋಶಿ ಅವರನ್ನು ನೇಮಕ ಮಾಡುವಲ್ಲಿ ನನ್ನ ಪಾತ್ರ ಏನೇನೂ ಇಲ್ಲ. ಜೋಶಿ ನನ್ನ ಕೈಗೊಂಬೆಯೂ ಅಲ್ಲ. ಬಿಜೆಪಿಯಲ್ಲಿ ಯಾವುದೇ ಬಿಕ್ಕಟ್ಟು ಕೂಡಾ ಇಲ್ಲ ಎಂದು ಬಿಜೆಪಿ ನಾಯಕ ಅನಂತ್‌ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಅನಂತ್ ಕುಮಾರ್ ಅವರು ತಮಗೆ ಬೇಕಾದ ನಾಯಕರನ್ನು ಆಯಕಟ್ಟಿನ ಜಾಗಗಳಲ್ಲಿ ಕೂರಿಸಿಕೊಂಡು ಪರೋಕ್ಷವಾಗಿ ಚುನಾವಣೆ ಟಿಕೆಟ್ ಹಾಗೂ ಪ್ರಚಾರ ಸಮಿತಿ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ ಎಂಬ ಮಾಧ್ಯಮಗಳ ವರದಿಯನ್ನು ಸಂಸದ ಅನಂತ್ ಕುಮಾರ್ ಅಲ್ಲಗೆಳೆದರು.
ಜೋಶಿ ಆಯ್ಕೆಯಲ್ಲಿ ಅನಂತ್ ಅವರ ಕೈ ಮೇಲಾಗಿದೆ. ಬಿಜೆಪಿಯಲ್ಲಿ ಅನಂತ್‌ಕುಮಾರ್ ಅವರದ್ದೇ ಪಾರಮ್ಯ ಎಂಬ ತಪ್ಪು ಗ್ರಹಿಕೆ ಯಾರಿಗೂ ಬೇಡ ಸಾಮೂಹಿಕ ನಾಯಕತ್ವದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಶ್ರಮಿಸಬೇಕು. ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೈ ಕಮಾಂಡ್ ಘೋಷಿಸಿದೆ. ಚುನಾವಣೆ ಸಂದರ್ಭದಲ್ಲಿ ಪಕ್ಷದ ಸಂಘಟನೆ ಮುಖ್ಯ, ಕಾರ್ಯಕರ್ತರು ಗೊಂದಲಗೊಳ್ಳುವುದು ಬೇಡ.

ಪ್ರಹ್ಲಾದ್ ಜೋಶಿ ಉತ್ತಮ ಸಂಸದೀಯ ಪಟುವಾಗಿದ್ದಾರೆ. ಆರ್‌ಎಸ್‌ಎಸ್ ಮೂಲದಿಂದ ಬಂದಿದ್ದಾರೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ನಾಯಕತ್ವ ಮತ್ತು ಪ್ರಹ್ಲಾದ್ ಜೋಶಿ ಅವರ ಮುಂದಾಳತ್ವದಲ್ಲಿ ಭಾರತೀಯ ಜನತಾ ಪಕ್ಷ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಅನಂತಕುಮಾರ್ ಹೇಳಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದರ ಜೊತೆಗೆ ಕೇಂದ್ರದ ಯುಪಿಎ ಸರ್ಕಾರ ಪತನಕ್ಕೂ ನಾಂದಿ ಹಾಡಬೇಕಿದೆ. ಈಗಾಗಲೇ ಯುಪಿಎ 2 ಸರ್ಕಾರಕ್ಕೆ ಒಳಗೆ ಮತ್ತು ಹೊರಗೆ ಬೆಂಬಲ ನೀಡಿರುವ ಪಕ್ಷಗಳು ಒಂದೊಂದಾಗಿ ಕಾಲು ತೆಗೆದು ಹೊರಗೆ ಬರುತ್ತಿವೆ. ಸರ್ಕಾರ ಇಂದೋ ನಾಳೆಯೋ ಅಸ್ತಿತ್ವ ಕಳೆದುಕೊಳ್ಳುವ ಅಪಾಯಕ್ಕೆ ಬಂದು ನಿಂತಿದೆ ಎಂದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಸಂಪೂರ್ಣವಾಗಿ ನೆಲ ಕಚ್ಚಲಿದೆ. ಎನ್‌ಡಿಎ ಅಧಿಕಾರಕ್ಕೆ ಬರಲಿದೆ. ನರೇಂದ್ರ ಮೋದಿಯವರು ಬಿಜೆಪಿಯ ಆಶಾಕಿರಣವಾಗಿದ್ದು, ಯಾರೇ ಏನೇ ಕಿತಾಪತಿ ಮಾಡಿದರೂ ಮೋದಿಯವರು ಪ್ರಧಾನಿ ಮಂತ್ರಿಯಾಗುವುದು ಶತಸಿದ್ಧ ಎಂದರು.
ಕೆಜೆಪಿ ಲೆಕ್ಕಕ್ಕಿಲ್ಲ: ರಾಜ್ಯದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಸ್ಪರ್ಧೆ ನಡೆಯಲಿದೆ. ಹಳೆಯ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಇದ್ದರೂ ಒಟ್ಟಾರೆ ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ನೇರ ಹಣಾಹಣಿ ನಡೆಯಲಿದೆ. ಉಳಿದ ಪ್ರಾದೇಶಿಕ ಪಕ್ಷಗಳನ್ನು ನಾವು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕೆಜೆಪಿ ಸಂಪೂರ್ಣ ಕಾಂಗ್ರೆಸ್ ಹಿಡಿತದಲ್ಲಿದೆ. ಬಿಜೆಪಿಯನ್ನು ಹಾಳು ಮಾಡಬೇಕೆಂಬ ಉದ್ದೇಶದಿಂದಲೇ ಕೆಜೆಪಿ-ಕಾಂಗ್ರೆಸ್ ಒಳಒಪ್ಪಂದಕ್ಕೆ ಬಂದಿವೆ. ಒಳ್ಳೆ ಉದ್ದೇಶದಿಂದ ಕೈ ಜೋಡಿಸಿದರೆ ಒಳ್ಳೆಯದೇ ಆಗುತ್ತದೆ. ಈ ರೀತಿ ಪಕ್ಷ ದ್ವೇಷದಿಂದ ರಾಜ್ಯದ ಏಳಿಗೆ ಸಾಧ್ಯವಿಲ್ಲ ಎಂದು ಅನಂತ್ ಕುಮಾರ್ ಹೇಳಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications