ಕೈ'ಪಟ್ಟಿ ಹಿಡಿದು ದೆಹಲಿಗೆ ಹೊರಟ ಪರಮೇಶ್ವರ್

ದೇವನಹಳ್ಳಿ ಬಳಿಯ ರೆಸಾರ್ಟ್ ನಲ್ಲಿ ಎರಡು ದಿನ ನಡೆದ ರಾಜ್ಯ ಚುನಾವಣಾ ಸಮಿತಿ ಸಭೆಯಲ್ಲಿ ಅಂತಿಮಗೊಳಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ಪರಮೇಶ್ವರ್ ದೆಹಲಿಗೆ ತೆಗೆದುಕೊಂಡು ಹೋಗಲಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಅಂತಿಮ ಪಟ್ಟಿಯನ್ನು ನೀಡಿ, ಅಭ್ಯರ್ಥಿಗಳ ಆಯ್ಕೆಗೆ ಅಂತಿಮ ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ.
ಗುರುವಾರ ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಅನ್ಯ ಪಕ್ಷೀಯರ ಸೇರ್ಪಡೆ ಬಗ್ಗೆ ಅಂತಿಮ ನಿರ್ಧಾರ ಹೊರಬೀಳುವ ಸಂಭವವಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಅಂತಿಮ ನಿರ್ಧಾರದ ಮೇಲೆ ವಲಸಿಗರಿಗೆ ಟಿಕೆಟ್ ನೀಡುವ ಬಗ್ಗೆ ಕಾಂಗ್ರೆಸ್ ನಿರ್ಧಾರ ಕೈಗೊಳ್ಳಲಿದೆ.
ಈಗಾಗಲೇ ಕಾಂಗ್ರೆಸ್ ಸೇರಿರುವ ಮಾಜಿ ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಟಿಕೆಟ್ ನೀಡುವ ಬಗ್ಗೆ ರಾಜ್ಯ ಚುನಾವಣಾ ಸಮಿತಿ ಸಭೆ ಅಂತಿಮ ತೀರ್ಮಾನ ಕೈಗೊಂಡಿಲ್ಲ. ವಲಸಿಗರಾಗಿ ಪಕ್ಷಕ್ಕೆ ಆಗಮಿಸುವ ರಾಜೂಗೌಡ, ಪಕ್ಷೇತರ ಅಭ್ಯರ್ಥಿಗಳಿಗೆ ಯಾವ ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಯಲಿದೆ.
ರಾಜ್ಯದಲ್ಲೇ ಮಿಸ್ತ್ರೀ ವಾಸ್ತವ್ಯ :ಕಳೆದ ವಾರ ಬೆಂಗಳೂರಿಗೆ ಆಗಮಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮಧುಸೂದನ್ ಮಿಸ್ತ್ರೀ ರಾಜ್ಯದಲ್ಲೇ ವಾಸ್ತವ್ಯ ಹೂಡಿದ್ದಾರೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷರೊಂದಿಗೆ ಚುನಾವಣಾ ಸಿದ್ದತೆಗಳ ಬಗ್ಗೆ ಸಭೆ ನಡೆಸುತ್ತಿದ್ದಾರೆ.
ವಿಧಾನಸಭೆ ಚುನಾವಣೆ ಜೊತೆಗೆ ಮುಂಬರುವ ಲೋಕಸಭಾ ಚುನಾವಣೆಯ ಸಿದ್ದತೆಗಳ ಬಗ್ಗೆಯೂ ಮಿಸ್ತ್ರೀ ಜಿಲ್ಲಾಧ್ಯಕ್ಷರೊಂದಿಗೆ ಸಭೆ ನಡೆಸುತ್ತಿದ್ದಾರೆ. ಲೋಕಸಭಾ ಅಭ್ಯರ್ಥಿಗಳ ಆಯ್ಕೆಯ ಬಗ್ಗೆಯೂ ಮಿಸ್ತ್ರಿ ಚರ್ಚೆ ನಡೆಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇಂದು ದೆಹಲಿಗೆ ತೆರಳಲಿರುವ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಜೊತೆ ಮಿಸ್ತ್ರೀಯವರು ದೆಹಲಿಗೆ ತೆರಳುವ ಸಂಭವಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಅಧಿಕಾರ ಪಡೆಯುವ ಉತ್ಸಾಹದಲ್ಲಿರುವ ಕಾಂಗ್ರೆಸ್ ನಾಳೆಯ ಸಭೆಯ ಬಳಿಕ ಅಧಿಕೃತವಾಗಿ ಪ್ರಚಾರ ಕಾರ್ಯ ಆರಂಭಿಸುವ ಸಾಧ್ಯತೆ ಇದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications