ಮಂಡ್ಯ: ವೀರಯೋಧ ಪಂಚಭೂತಗಳಲ್ಲಿ ಲೀನ

ಮೃತ ಯೋಧನ ಪಾರ್ಥಿವ ಶರೀರ ತವರಿಗೆ ಬರುತ್ತಿದ್ದಂತೆ ಸಂಬಂಧಿಕರ ದುಖಃ ಕಟ್ಟೆಯೊಡೆಯಿತು. ನೂರಾರು ಜನರು ಅಂತಿಮ ದರ್ಶನ ಪಡೆಯಲು ಮುಂದಾದರು. ಇದರಿಂದ ನೂಕು ನುಗ್ಗಲು ಉಂಟಾಯಿತು. ಪೊಲೀಸರು, ಜಿಲ್ಲಾಧಿಕಾರಿ ಎಂ.ಕೃಷ್ಣಯ್ಯ ಸೂಚನೆಯಂತೆ ಸತೀಶ್ ಕುಟುಂಬದ ಸದಸ್ಯರಿಗೆ ಅಂತಿಮ ದರ್ಶನ ಪಡೆಯಲು ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಿಕೊಟ್ಟರು.
ಅಂಬವಾಡಿಗೆ ಪಾರ್ಥಿವ ಶರೀರ ಬರುತ್ತಿದ್ದಂತೆಯೇ ಗ್ರಾಮಸ್ಥರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿದರು. ಸರ್ಕಾರ ಮೃತ ಯೋಧನ ಕುಟುಂಬಕ್ಕೆ ಸೂಕ್ತವಾಗಿ ಸಾಂತ್ವನ ಹೇಳಿಲ್ಲ ಎಂದು ಆರೋಪಿಸಿದರು. ಯೋಧನ ಅಂತಿಮ ಸಂಸ್ಕಾರಕ್ಕೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆಗಮಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಧಾನದ ನಂತರ ಅಂತ್ಯಕ್ರಿಯೆ ನಡೆಸಲು ಗ್ರಾಮಸ್ಥರು ಅನುಮತಿ ನೀಡಿದರು. ಸತೀಶ್ ಅವರ ಕುಟಂಬಕ್ಕೆ ಸೇರಿದ ಜಮೀನಿನಲ್ಲಿ ಅಂತ್ಯಕ್ರಿಯೆಯ ವಿಧಿವಿದಾನಗಳನ್ನು ನೆರವೇರಿಸಲಾಯಿತು. ನೂರಾರು ಶಾಲಾ ಮಕ್ಕಳು, ವಿವಿಧ ಸಂಘಟನೆಗಳ ಮುಖಂಡರು ವೀರಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಜಿಲ್ಲಾ ಪೊಲೀಸ್ ಮತ್ತು ಸಶಸ್ತ್ರ ಮೀಸಲು ಪಡೆ ಯೋಧರು ಸಕಲ ಸರ್ಕಾರಿ ಗೌರವ ಸಲ್ಲಿಸಿದರು.
ಮುಖ್ಯಮಂತ್ರಿ ಸಂತಾಪ : ರಾಜ್ಯದ ಯೋಧ ಸತೀಶ್ ಉಗ್ರರ ದಾಳಿಗೆ ತುತ್ತಾಗಿ ಮೃತ ಪಟ್ಟಿರುವುದಕ್ಕೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತೀವ್ರ ಸಂತಾಪ ಸೂಚಿಸಿದ್ದಾರೆ. ರಾಜ್ಯಸರ್ಕಾರದ ವತಿಯಿಂದ ಮೃತನ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರ ಪ್ರಕಟಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಪರಿಹಾರ ಘೋಷಣೆ : ಉಗ್ರರ ದಾಳಿಯಲ್ಲಿ ಮೃತಪಟ್ಟ ಸತೀಶ್ ಕುಟುಂಬಕ್ಕೆ ಕೇಂದ್ರ ಸರ್ಕಾರ 15 ಲಕ್ಷ ರೂ.ಗಳ ಪರಿಹಾರ ಘೋಷಿಸಿದೆ. ಕುಟುಂಬದ ಒಬ್ಬ ವ್ಯಕ್ತಿಗೆ ಉದ್ಯೋಗ ನೀಡುವ ಭರವಸೆ ನೀಡಿದೆ. ಜಮ್ಮ ಕಾಶ್ಮೀರ ಸರ್ಕಾರವು ಮೃತ ಯೋಧನ ಕುಟುಂಬಕ್ಕೆ 10 ಲಕ್ಷ ರೂ.ಗಳ ಪರಿಹಾರ ಘೋಷಿಸಿದೆ.
ಜಿಲ್ಲಾಧಿಕಾರಿ ಸ್ಪಷ್ಟನೆ : ಉಗ್ರರ ದಾಳಿಯಲ್ಲಿ ಮೃತಪಟ್ಟ ಯೋಧನ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರ ಭಾವಚಿತ್ರವನ್ನು ತಪ್ಪಾಗಿ ಪ್ರಕಟಿಸಿಲ್ಲ ಎಂದು ಮಂಡ್ಯ ಜಿಲ್ಲಾಧಿಕಾರಿ ಎಂ.ಕೃಷ್ಣಯ್ಯ ಸ್ಪಷ್ಟನೆ ನೀಡಿದ್ದಾರೆ
ಮೃತ ಯೋಧ ಸತೀಶ್ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರದ ಮೆರವಣಿಗೆಯಲ್ಲಿ ಅವರ ಸಹೋದರ ಹರೀಶ್ ಭಾವಚಿತ್ರವನ್ನು ಜಿಲ್ಲಾಡಳಿತ ಬಳಸಿದೆ ಎಂಬ ಮಾಧ್ಯಮಗಳ ವರದಿಯಿಂದ ಎಚ್ಚೆತ್ತ ಜಿಲ್ಲಾಧಿಕಾರಿ, ಯೋಧನ ಮೃತ ದೇಹದ ಮೆರವಣಿಗೆಯಲ್ಲಿ ಸತೀಶ್ ಕುಟುಂಬ ಸದಸ್ಯರು ನೀಡಿದ ಭಾವ ಚಿತ್ರವನ್ನೆ ಬಳಸಿದ್ದೇವೆ ನಮ್ಮಿಂದ ಯಾವುದೇ ತಪ್ಪುಗಳು ನಡೆದಿಲ್ಲ ಎಂದು ಹೇಳಿದ್ದಾರೆ. (ಹುತಾತ್ಮ ಯೋಧ ಸತೀಶನ ತ್ಯಾಗ ಮರೆಯದಿರಿ)
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications