ಕರ್ನಾಟಕವನ್ನು ದೂರಿ ಪ್ರಧಾನಿಗೆ ಜಯಲಲಿತಾ ಪತ್ರ

ಮಂಗಳವಾರ ಪ್ರಧಾನಿ ಮನಮಹೋಹನ್ ಸಿಂಗ್ ಅವರಿಗೆ ಪತ್ರ ಬರೆದಿರುವ ಜಯಲಲಿತಾ, ಕರ್ನಾಟಕ ಕಾವೇರಿ ಅಧಿಸೂಚನೆಯನ್ನು ಪಾಲಿಸುತ್ತಿಲ್ಲ. ತಕ್ಷಣ ಮೇಲ್ವಿಚಾರಣ ಸಮಿತಿ ರಚಿಸಿ ನೀರಿನ ಹಂಚಿಕೆ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕೆಆರ್ಎಸ್, ಕಬಿನಿ, ಹೇಮಾವತಿ ಮತ್ತು ಹಾರಂಗಿ ಜಲಾಶಯಗಳಲ್ಲಿ ನೀರು ಶೇಖರಣೆ ಆಗಲು ಕರ್ನಾಟಕ ಅವಕಾಶ ನೀಡುತ್ತಿಲ್ಲ. ಜಲಾಶಯಗಳಿಗೆ ಹರಿದು ಬರುವ ಒಳ ಹರಿವನ್ನು ಕರ್ನಾಟಕ ಬೇಸಿಗೆ ಬೆಳೆಗಳಿಗೆ ಬಳಸಿಕೊಂಡು ಅಧಿಸೂಚನೆ ಉಲ್ಲಂಘನೆ ಮಾಡುತ್ತಿದೆ ಎಂದು ದೂರಿದ್ದಾರೆ.
ಮಾರ್ಚ್ ಕೊನೆಯಲ್ಲಿ ಅಥವ ಏಪ್ರಿಲ್ ಮೊದಲನೇ ವಾರದಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗಲಿದೆ. ಈಗಿನ ಒಳ ಹರಿವನ್ನು ಸಂಗ್ರಹಿಸಿ ತಮಿಳುನಾಡಿಗೆ ನೀರು ಹರಿಸುವಂತೆ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೆ, ಕರ್ನಾಟಕ ಬೇಸಿಗೆಯ ಬೆಳೆಗಳಿಗೆ ಒಳ ಹರಿವಿನ ನೀರನ್ನು ಬಳಸಿಕೊಳ್ಳುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕರ್ನಾಟಕ ನೀರಾವರಿ ಸಂಗ್ರಹಕ್ಕೆ ಅವಕಾಶ ಕಲ್ಪಿಸದೆ ಅದನ್ನು ಬೆಳೆಗಳಿಗೆ ಬಳಸಿಕೊಂಡು ಜಲಾಶಯಗಳಲ್ಲಿ ನೀರಿನ ಕೊರತೆ ಉಂಟಾಗುವಂತೆ ಮಾಡುತ್ತಿದೆ. ಜೂನ್ 1ರಿಂದ ಜನವರಿ 31ರವರೆಗೆ ನೀರಾವರಿ ಋತು ಎಂದು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ. ಈಗಿನಿಂದಲೇ ನೀರು ಸಂಗ್ರಹಿಸಿ ಜೂನ್ ನಲ್ಲಿ ತಮಿಳುನಾಡಿಗೆ ಬಿಡುಗಡೆ ಮಾಡಬೇಕು.
ಕರ್ನಾಟಕ ಅಧಿಸೂಚನೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿಸುತ್ತಿದೆ. ಆದ್ದರಿಂದ ತಕ್ಷಣ ಮೇಲ್ವಿಚಾರಣಾ ಸಮಿತಿ ರಚಿಸಬೇಕು ಎಂದು ಜಯಲಲಿತಾ ಒತ್ತಾಯಿಸಿದ್ದಾರೆ. ಕಾವೇರಿ ಅಧಿಸೂಚನೆ ಪ್ರಕಟವಾದ ನಂತರ ಸಮಿತಿ ರಚಿಸುವಂತೆ ಜಯಲಲಿತಾ ಎರಡನೇ ಬಾರಿ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications