ಮೈಸೂರು : ಸ್ನೇಕ್ ಶ್ಯಾಂ ಎದುರಾಳಿ ಯಾರಾಗಿದ್ದರು ?

ಬಿಜೆಪಿ ಸರ್ಕಾರದ ಸಚಿವರು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ರಾಮದಾಸ್ ಅವರಿಗೆ ಮೈಸೂರು ಪಾಲಿಕೆ ಚುನಾವಣೆ ಫಲಿತಾಂಶ ತೃಪ್ತಿ ನೀಡಿಲ್ಲ. ಆದರೆ, ಪಾಲಿಕೆ ಚುನಾವಣೆಯಲ್ಲಿ ಎಲ್ಲರ ಗಮನ ಸೆಳೆದಿರುವುದು ಸ್ನೇಕ್ ಶ್ಯಾಂ ಗೆಲವು.
ವಾರ್ಡ್ ನಂ 17ರಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸ್ನೇಕ್ ಶ್ಯಾಂ 1713 ಮತಗಳನ್ನು ಪಡೆದು ಭರ್ಜರಿಯಾಗಿಯೇ ಜಯಗಳಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಯಾರು ಗೊತ್ತೆ ? ಕಾಂಗ್ರೆಸ್ ಅಭ್ಯರ್ಥಿ ಮೈಸೂರಿನ ಮಾಜಿ ಉಪಮಹಾಪೌರ ಬಿ.ಸಿದ್ಧರಾಜು.
ತುಂಬಾ ಆಸಕ್ತಿಕರ ಅಂಶವಾದರೂ ಇದು ಸತ್ಯ. ಮೈಸೂರು ಪಾಲಿಕೆಗೆ ಎರಡು ಬಾರಿ ಅಯ್ಕೆಯಾಗಿ, ಉಪ ಮೇಯರ್ ಸಹ ಆಗಿದ್ದ ಸಿದ್ಧರಾಜು ಸ್ನೇಕ್ ಶ್ಯಾಂ ಅವರಿಂದ ಸೋಲಿನ ರುಚಿ ಕಂಡಿದ್ದಾರೆ. ಕೇವಲ 1464 ಮತಗಳನ್ನು ಪಡೆದ ಸಿದ್ದರಾಜು ಮೊದಲ ಬಾರಿಗೆ ಚುನಾವಣೆಗೆ ನಿಂತ ಸ್ನೇಕ್ ಶ್ಯಾಂ ಮುಂದೆ ಪರಾಭವಗೊಂಡಿದ್ದಾರೆ.
ಸ್ನೇಕ್ ಶ್ಯಾಂ ಎಂದೇ ಖ್ಯಾತರಾಗಿರುವ ಅವರ ಮೂಲ ಹೆಸರು ಎಸ್.ಬಾಲಸುಬ್ರಮಣ್ಯ. 1980 ರಲ್ಲಿ ಹಾವುಗಳನ್ನು ರಕ್ಷಿಸಲು ಪ್ರಾರಂಭಿಸಿದ ಶ್ಯಾಂ ಇದುವರೆಗೂ ಸುಮಾರು 26,894 ಹಾವುಗಳನ್ನು ರಕ್ಷಿಸಿದ್ದಾರೆ. ತಮ್ಮ ಕತ್ತಿನಲ್ಲಿನ ಬಗೆಬಗೆಯ ಸರಗಳು, ಕೈಯಲ್ಲಿನ ವಿವಿಧ ಮಾದರಿಯ ಉಂಗುರಗಳು ಮುಂತಾದ ತಮ್ಮ ವರ್ಣರಂಜಿತ ವೇಷ ಭೂಷಣಗಳಿಂದ ಶ್ಯಾಂ ಎಲ್ಲರನ್ನು ಆಕರ್ಷಿಸುತ್ತಾರೆ.
ಮೈಸೂರಿನ ಯಾವುದೇ ಭಾಗದಲ್ಲಿ ಹಾವುಗಳು ಕಂಡರು ಜನರು ಮೊದಲು ಶ್ಯಾಂಗೆ ಕರೆ ಮಾಡುತ್ತಾರೆ. ಆದ್ದರಿಂದ ಶ್ಯಾಂ ಅತ್ಯಂತ ಜನಪ್ರಿಯ ವ್ಯಕ್ತಿ. ಇಂತಹ ಜನಪ್ರಿಯತೆ ಚುನಾವಣೆಯಲ್ಲಿಯೂ ಕೈ ಹಿಡಿದಿದೆ. ವಿಷಕಾರಿ ಹಾವುಗಳನ್ನು ಸುಲಭವಾಗಿ ಹಿಡಿಯುವಂತೆ, ಉಪ ಮೇಯರ್ ವಿರುದ್ಧ ಶ್ಯಾಂ ಗೆಲವು ಸಾಧಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಶ್ಯಾಂ ಅವರಿಗೆ ಟಿಕೆಟ್ ನೀಡಿ ಚುನಾವಣೆಗೆ ಕರೆತಂದಿದ್ದರು. ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಶ್ಯಾಂ ಜನರಿಗೆ ಯಾವುದೇ ಭರವಸೆ ನೀಡದೆ. ನಿಮ್ಮ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳುತ್ತಲೆ ಮತ ಯಾಚಿಸಿದ್ದರು.
ಮತದಾರರ ಮಾಜಿ ಉಪ ಮೇಯರ್ ಗೆ ಮತ ನೀಡದೆ ಶ್ಯಾಂಗೆ ಬೆಂಬಲ ಸೂಚಿಸಿ ಚುನಾವಣೆ ಗೆಲ್ಲಿಸಿದ್ದಾರೆ. ಜನರ ಕಷ್ಟಕ್ಕೆ ಸ್ಪಂದಿಸುವ ಜೊತೆ ಹಾವುಗಳ ರಕ್ಷಣೆ ಸಹ ಮಾಡುತ್ತೇನೆ ಎಂದು ಸ್ನೇಕ್ ಶ್ಯಾಂ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಮೈಸೂರು ಪಾಲಿಕೆಯಲ್ಲಿ ಒಟ್ಟು 65 ವಾರ್ಡ್ ಗಳಿದ್ದು ಬಿಜೆಪಿ 12, ಕಾಂಗ್ರೆಸ್ 22, ಜೆಡಿಎಸ್ 20, ಪಕ್ಷೇತರರು 9 ಮತ್ತು ಬಿಎಸ್ಆರ್ ಕಾಂಗ್ರೆಸ್ ಮತ್ತು ಕೆಜೆಪಿ ತಲಾ ಒಂದು ಸ್ಥಾನಗಳಲ್ಲಿ ಜಯಗಳಿಸಿವೆ. ಪಕ್ಷೇತರರ ಬೆಂಬಲದಿಂದ ಯಾರು ಪಾಲಿಕೆ ಅಧಿಕಾರ ಪಡೆಯುತ್ತಾರೆ ? ಎಂಬುದು ಇನ್ನೂ ನಿರ್ಧಾರವಾಗಿಲ್ಲ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications