ದೆಹಲಿ ಗ್ಯಾಂಗ್ ರೇಪ್ ಆರೋಪಿ ರಾಮ್ ಆತ್ಮಹತ್ಯೆ

ಭಾರೀ ಭದ್ರತೆ ನೀಡಲಾಗಿತ್ತಾದರೂ, ಎಲ್ಲರ ಕಣ್ಣು ತಪ್ಪಿಸಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾದರೂ ಹೇಗೆ ಎಂಬ ಪ್ರಶ್ನೆ ಈಗ ಎದುರಾಗಿದೆ. ನಂ.3 ಬಂದಿಖಾನೆಯಲ್ಲಿದ್ದ ರಾಮ್ ಸಿಂಗ್ ತನ್ನ ಬಟ್ಟೆಗಳನ್ನು ಬಳಸಿ ಸರಳಿಗೆ ನೇತುಬಿದ್ದುಕೊಂಡ ಸ್ಥಿತಿಯಲ್ಲಿ ಸಿಕ್ಕಿದ್ದಾನೆ.
ಆತ ಬಂದಿಖಾನೆಯಲ್ಲಿ ಏಕಾಂಗಿಯಾಗಿರಲಿಲ್ಲ. ಆತನೊಂದಿಗೆ ಸಾಮೂಹಿಕ ಅತ್ಯಾಚಾರದಲ್ಲಿ ಭಾಗಿಯಾಗಿದ್ದ ಇತರ ಆರೋಪಿಗಳೂ ಇದ್ದರು. ಜೊತೆಗೆ ಒಬ್ಬ ಗಾರ್ಡ್ ಕೂಡ ಇದ್ದ. ಆದರೆ, ಅವರಾರಿಗೂ ಆತ್ಮಹತ್ಯೆಯ ಸುಳಿವು ಸಿಕ್ಕಿಲ್ಲ. ಬೆಳಗಿನ ಜಾವ 5.30ರ ಸುಮಾರಿಗೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದು ತಿಳಿದುಬಂದಿದೆ.
ರಾಮ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆತನನ್ನು ಜೈಲಿನ ಅಧಿಕಾರಿಗಳೇ ಹತ್ಯೆ ಮಾಡಿದ್ದಾರೆ ಎಂದು ರಾಮ್ ಸಿಂಗ್ ವಕೀಲರು ಮತ್ತು ಕುಟುಂಬದವರು ಆರೋಪಿಸಿದ್ದಾರೆ. ಆತನ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಕುಟುಂಬದವರು ಆಗ್ರಹಿಸುತ್ತಿದ್ದಾರೆ.
ವಿಧಿವಿಜ್ಞಾನ ಇಲಾಖೆಯ ತಜ್ಞರು ಸ್ಥಳಕ್ಕೆ ಆಗಮಿಸಿ ಆತನ ದೇಹದ ಕೆಲ ಸ್ಯಾಂಪಲ್ ತೆಗೆದುಕೊಂಡು ಪರೀಕ್ಷೆ ಆರಂಭಿಸಿದ್ದಾರೆ. ಕಳೆದ ಕೆಲ ದಿನಗಳಿಂದ ರಾಮ್ ಸಿಂಗ್ ತುಂಬಾ ಒತ್ತಡದಲ್ಲಿದ್ದ. ಭಾನುವಾರ ಊಟವನ್ನೂ ಮಾಡಿಲ್ಲ ಎಂದು ಜೈಲಿನ ಅಧಿಕಾರಿಗಳು ವಿವರಣೆ ಕೊಟ್ಟಿದ್ದಾರೆ. ಕೂಡಲೆ ಆತನನ್ನು ಜೈಲಿನಲ್ಲಿದ್ದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ತರುವ ಮೊದಲೇ ಸತ್ತಿದ್ದ ಎಂದು ವೈದ್ಯರು ಘೋಷಿಸಿದರು.
ಕೆಣಕಿದಾಗ ವೃಗದಂತೆ ವ್ಯಗ್ರವಾಗಿ ವರ್ತಿಸುತ್ತಿದ್ದ ರಾಮ್ ಸಿಂಗ್ ಮನಃಸ್ಥಿತಿ ಸ್ಥಿಮಿತದಲ್ಲಿ ಇರುತ್ತಿರಲಿಲ್ಲ. 23 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದಾಗಲೂ ಮೃಗೀಯವಾಗಿ ವರ್ತಿಸಿದ್ದ. ಅಲ್ಲದೆ, ಆತ ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂಬ ಗುಮಾನಿ ಇದ್ದರಿಂದ ಆತನನ್ನು ಗಮನಿಸಲು ಸಿಬ್ಬಂದಿಯನ್ನು ನೇಮಿಸಲಾಗಿತ್ತು.
ರಾಮ್ ಸಿಂಗ್ ಸಾವು ಸಂಶಯಾತ್ಮಕವಾಗಿ ಆಗಿರುವುದರಿಂದ ದೆಹಲಿ ಸರಕಾರ ಮ್ಯಾಜಿಸ್ಟ್ರೇಟ್‌ರಿಂದ ತನಿಖೆ ನಡೆಸಲು ತೀರ್ಮಾನಿಸಿದೆ. ತನಿಖೆಗೆ ಆದೇಶಿಸಿರುವುದರಿಂದ ವರದಿ ವರದಿ ಬರುವವರೆಗೂ ಈ ಪ್ರಕರಣದ ಬಗ್ಗೆ ಹೇಳಿಕೆ ನೀಡುವುದು ಕಷ್ಟವಾಗುತ್ತದೆ. ಆಟೋಪ್ಸಿ ನಡೆದು ವರದಿ ಬಂದರೆ ಎಲ್ಲ ತಿಳಿಯಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹೇಳಿದ್ದಾರೆ.
ಭದ್ರತಾ ಲೋಪ, ಒಪ್ಪಿದ ಶಿಂಧೆ : ಆರೋಪಿ ರಾಮ್ ಸಿಂಗ್ ಆತ್ಮಹತ್ಯೆ ತಿಹಾರ್ ಜೈಲಿನಲ್ಲಿನ ಭದ್ರತಾ ಲೋಪವನ್ನು ತೋರಿಸಿದೆ. ಇದೊಂದು ದೊಡ್ಡ ಪ್ರಮಾದ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಸೋಮವಾರ ಮಧ್ಯಾಹ್ನ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಒಪ್ಪಿಕೊಂಡಿದ್ದಾರೆ.












Click it and Unblock the Notifications