ಬೆಂಗಳೂರಿನಿಂದ ಸಿಂಗಪುರಕ್ಕೆ 2700 ರು ಮಾತ್ರ*
ಬೆಂಗಳೂರು, ಮಾ.8 : ಸಿಂಗಪುರದ ಮೂಲದ ಟೈಗರ್ ಏರ್ ವೇಸ್ ತನ್ನ ವಾರ್ಷಿಕೋತ್ಸವ ಕೊಡುಗೆಯಾಗಿ ಅತಿ ಕಡಿಮೆ ವೆಚ್ಚದಲ್ಲಿ ಬೆಂಗಳೂರು, ಹೈದರಾಬಾದ್, ಕೊಚ್ಚಿ, ತಿರುವನಂತಪುರಂ ಹಾಗೂ ತಿರುಚನಾಪಳ್ಳಿಯಿಂದ ಸಿಂಗಪುರಕ್ಕೆ ವಿಮಾನಯಾನ ಸೇವೆ ಕಲ್ಪಿಸುತ್ತಿದೆ.
ಈ ಆಫರ್ ಮೇ 1 ರಿಂದ ಡಿಸೆಂಬರ್ 15 ರ ತನಕದ ಪ್ರಯಾಣಕ್ಕೆ ಮಾತ್ರ ಸೀಮಿತವಾಗಿದ್ದು, ಮಾ.15ರೊಳಗೆ ಟಿಕೆಟ್ ಖರೀದಿಸಬೇಕಾಗಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣಕ್ಕೆ ಟಿಕೆಟ್ ಮೊತ್ತ 50 ಡಾಲರ್ (2700 ರು) ಮಾತ್ರ. ಯಾರಿಗುಂಟು ಯಾರಿಗಿಲ್ಲ. ಈಗಲೇ ಟೈಗರ್ ಏರ್ ವೇಸ್ ವೆಬ್ ಸೈಟ್ ಗೆ ಹೋಗಿ ಬುಕ್ ಮಾಡಿಕೊಳ್ಳಿ

ಕಂಡೀಷನ್ಸ್ ಅಪ್ಲೈ: ಆದರೆ, ಈ ಭರ್ಜರಿ ಆಫರ್ ಟಿಕೆಟ್ ಹೊಂದಿದ 10 ಮಂದಿ ಮಾತ್ರ ಪ್ರತಿ ವಿಮಾನಯಾನದಲ್ಲೂ ಪ್ರಯಾಣಿಸುವ ಅವಕಾಶ ದೊರೆಯಲಿದೆ. ಭಾರತದ ಆಗಸದಲ್ಲಿ ಐದು ವರ್ಷ ಯಶಸ್ವಿಯಾಗಿ ಪೂರೈಸಿದ ಖುಷಿಯಲ್ಲಿ ಟೈಗರ್ ಏರ್ ವೇಸ್ ಈ ಕೊಡುಗೆ ನೀಡುತ್ತಿದೆ. ನಿಗದಿತ ವೇಳೆಯಲ್ಲಿ ಈ ಆಫರ್ ಟಿಕೆಟ್ ಉಳಿದರೆ ಕಡೆಗೆ 100 ಡಾಲರ್ ನೀಡಿ ಟಿಕೆಟ್ ಮಾರಾಟ ಮಾಡಲು ಸಂಸ್ಥೆ ಮುಂದಾಗಿದೆ.
ಏರ್ ಇಂಡಿಯಾ, ಇಂಡಿಗೋ ಏರ್ ಲೈನ್ಸ್ ನ ಸರಾಸರಿ ಪ್ರಯಾಣ ದರ ಸುಮಾರು 9,000 ರು ನಷ್ಟಿದೆ. ಟೈಗರ್ ಏರ್ ವೇಸ್ ಮೊದಲಿನಿಂದಲೂ ಪ್ರಯಾಣಿಕ ಸ್ನೇಹಿ ದರ ಪಟ್ಟಿಯನ್ನು ಹಿಡಿದುಕೊಂಡೇ ಬೆಳೆಯುತ್ತಾ ಬಂದಿದೆ.
ಇತ್ತೀಚೆಗೆ ಭಾರತದಲ್ಲಿ ಸ್ಪೈಸ್ ಜೆಟ್ ಪ್ರಯಾಣ ದರ ಇಳಿಕೆ ಮಾಡಿತ್ತು. ನಂತರ ಇದೇ ಹಾದಿಯಲ್ಲಿ ಸಾಗಿದ ಜೆಟ್ ಏರ್ ವೇಸ್, ಇಂಡಿಗೋ ಹಾಗೂ ಏರ್ ಇಂಡಿಯಾ ಪ್ರಯಾಣಿಕರಿಗೆ ಒಳ್ಳೆ ಆಫರ್ ನೀಡಿದ್ದವು.
2007ರ ಅಕ್ಟೋಬರ್ ನಲ್ಲಿ ವಿಮಾನಯಾನ ಆರಂಭಿಸಿದ ಟೈಗರ್ ಏರ್ ವೇಸ್ ಈ ವರೆಗೂ ಸಿಂಗಪುರ ಹಾಗೂ ಭಾರತದ ನಡುವೆ 1.4 ಮಿಲಿಯನ್ ಮಂದಿಯನ್ನು ಸುರಕ್ಷಿತವಾಗಿ ಹೊತ್ತೊಯ್ದಿದೆ. ಭಾರತದಲ್ಲಿ ಸರಿಯಾದ ಜೋಡಿಯೊಂದನ್ನು ಹುಡುಕುತ್ತಿರುವ ಸಿಂಗಪುರದ ಟೈಗರ್, ಭಾರತದಲ್ಲಿ ಸಶಕ್ತವಾದ ವಿಮಾನಯಾನ ಸಂಸ್ಥೆ ಸ್ಥಾಪಿಸುವ ಉದ್ದೇಶ ಹೊಂದಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications