ಮಲ್ಲೇಶ್ವರಂ ಮಾರುಕಟ್ಟೆ ತೆರವು- ವ್ಯಾಪಾರಿಗಳ ವಿರೋಧ

ಪಾಲಿಕೆ ಅಧಿಕಾರಿಗಳು ಮಾರುಕಟ್ಟೆ ಬಳಿ ಬಂದಾಗ ವ್ಯಾಪಾರಸ್ಥರು ಪಾಲಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಂಗಡಿ ತೆರವುಗೊಳಿಸುವ ಕುರಿತು ಶುಕ್ರವಾರ ನೋಟಿಸ್ ನೀಡಿ ಶನಿವಾರ ತೆರವುಗೊಳಿಸಿದರೆ ಹೇಗೆ? ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡಿ. ಸಮಯವಕಾಶ ನೀಡಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮಲ್ಲೇಶ್ವರಂ ಮಾರುಕಟ್ಟೆ ತೆರವುಗೊಳಿಸಿ ಆ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸುವುದು ಪಾಲಿಕೆಯ ಆಲೋಚನೆ. ಆದರೆ, ಇಲ್ಲಿನ ವ್ಯಾಪಾರಿಗಳಿಗೆ ತಾತ್ಕಾಲಿಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಟ್ಟಿಲ್ಲ. ತಾತ್ಕಾಲಿಕ ಮಾರುಕಟ್ಟೆಗಾಗಿ ನಿರ್ಮಿಸಿರುವ ಜಾಗದಲ್ಲಿ ವಿದ್ಯುತ್ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಟ್ಟಿಲ್ಲ. ಆದ್ದರಿಂದ ವ್ಯಾಪಾರಿಗಳು ಅಂಗಡಿಗಳ ತೆರವಿಗೆ ತೀವ್ರ ಆಕ್ರೋಶ ವ್ಯಕ್ತಪಡಿದ್ದಾರೆ.
ವ್ಯಾಪಾರಸ್ಥರ ವಿರೋಧದ ನಡುವೆಯೂ ಪಾಲಿಕೆ ಅಧಿಕಾರಿಗಳು 2 ಅಂಗಡಿಗಳನ್ನು ತೆರವುಗೊಳಿಸಿದರು. ಪಾಲಿಕೆ ಕ್ರಮ ಪ್ರಶ್ನಿಸಿ ವ್ಯಾಪಾರಿಗಳು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈಗಾಗಲೇ ಮಾರುಕಟ್ಟೆಯ ಕೆಲವು ಭಾಗಗಳನ್ನು ತೆರವುಗೊಳಿಸಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗಿದೆ. ಉಳಿದ ಭಾಗವನ್ನು ತೆರವುಗೊಳಿಸಲು ಇಂದು ಅಧಿಕಾರಿಗಳು ಆಗಮಿಸಿದ್ದರು.
ವಿರೋಧವೇಕೆ : ಮಾರುಕಟ್ಟೆಯಲ್ಲಿ ಸದ್ಯ 250ಕ್ಕೂ ಹೆಚ್ಚು ಅಂಗಡಿಗಳಿವೆ. ಆದರೆ, ನೂತನವಾಗಿ ನಿರ್ಮಿಸುತ್ತಿರುವ ಕಾಂಪ್ಲೆಕ್ಸ್ ನಲ್ಲಿ ಎಲ್ಲಾ ಅಂಗಡಿಗಳ ಮಾಲೀಕರಿಗೂ ಸ್ಥಳ ಒದಸಿಸುವ ಭರವಸೆ ನೀಡಿಲ್ಲ. ತಾತ್ಕಾಲಿಕ ಮಾರುಕಟ್ಟೆಯಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಿಲ್ಲ.
ಅಧಿಕಾರಿಗಳು ಅಂಗಡಿ ತೆರವಿಗೆ ನೋಟಿಸ್ ನೀಡಿ ಮರುದಿನ ಬಂದು ಎತ್ತಂಗಡಿ ಮಾಡಿಸುತ್ತಿದ್ದಾರೆ, ಸೂಕ್ತ ಸಮಯಾವಕಾಶ ನೀಡಿಲ್ಲ. ಆದ್ದರಿಂದ ಅಂಗಡಿ ಮಾಲೀಕರು ಪಾಲಿಕೆ ವಿರುದ್ಧ ತಿರುಗಿ ಬಿದ್ದಿದ್ದಾರೆ.












Click it and Unblock the Notifications