ರಾಜ್ಯಕ್ಕೆ ಆಗಮಿಸಿದ ಕೇಂದ್ರ ಚುನಾವಣಾ ಆಯೋಗ

ಮದ್ಯಾಹ್ನ 12,30ರ ವೇಳೆಗೆ ಆಗಮಿಸಿದ ತಂಡದಲ್ಲಿ ಚುನಾವಣಾ ಆಯುಕ್ತರಾದ ಎನ್.ಎನ್.ಬ್ರಹ್ಮ, ಸೈಯದ್ ನಸೀಮ್ ಅಹಮದ್ ಜೈದಿ ಮುಂತಾದವರಿದ್ದಾರೆ. ತಂಡ ಎರಡು ದಿನಗಳ ಕಾಲ ರಾಜ್ಯದಲ್ಲಿ ಚುನಾವಣಾ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಲಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜಕೀಯ ಪಕ್ಷಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದೆ.
ಶುಕ್ರವಾರ ಮಧ್ಯಾಹ್ನ 4 ಗಂಟೆಗೆ ವಿಧಾನಸೌಧದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜೊತೆ ಚುನಾವಣಾ ಆಯೋಗದ ತಂಡ ಮಾತುಕತೆ ನಡೆಸುತ್ತಿದೆ. ವಿವಿಧ ಪಕ್ಷಗಳು ಚುನಾವಣಾ ನಡೆಸುವ ಬಗ್ಗೆ ನೀಡಿರುವ ಅಭಿಪ್ರಾಯವನ್ನು ತಂಡ ಸಂಗ್ರಹಿಸಲಿದೆ.
ಶನಿವಾರ ಮಾ.2ರಂದು ಬೆಳಗ್ಗೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಭೆ ನಡೆಸಲಿದೆ. ಮಧ್ಯಾಹ್ನ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ, ಕಂದಾಯ, ಪಂಚಾಯತ್‌ರಾಜ್ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳ ಜತೆ ಸಭೆ ನಡೆಸಲಿದೆ.
ಚುನಾವಣೆ ನಡೆಸುವ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಭಿಪ್ರಾಯಪಡೆದು, ರಾಜ್ಯ ಚುನಾವಣಾ ಆಯುಕ್ತರಿಂದ ಮತದಾರರ ಪಟ್ಟಿಗಳ ಪರಿಷ್ಕರಣೆ, ಆಕ್ಷೇಪಣೆ ಮುಂತಾದ ವಿಚಾರಗಳ ಕುರಿತಂತೆ ಚರ್ಚೆ ನಡೆಸಲಿದೆ. ಎಲ್ಲಾ ಅಧಿಕಾರಿಗಳ ಅಭಿಪ್ರಾಯಪಡೆದು ತಂಡ ದೆಹಲಿಗೆ ಮರಳಿದೆ.
ಕೇಂದ್ರ ಚುನಾವಣಾ ಆಯೋಗ ಪರಿಶೀಲನೆ ನಡೆಸಿ ಮರಳಿದ ಬಳಿಕ ವೇಳಾಪಟ್ಟಿ ಪ್ರಕಟವಾಗಲಿದೆ. ಆದರೆ, ರಾಜ್ಯದಲ್ಲಿ ಮಾ.7ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವುದರಿಂದ ಮಾ.15ರ ವೇಳೆಗೆ ರಾಜ್ಯ ವಿಧಾನಸಭಾ ಚುನಾವಣೆ ವೇಳಾಪಟ್ಟಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications