ವಿಧಾನಸಭೆ ಟಿಕೆಟ್ ಕೇಳಿದ ಬಿಜೆಪಿಯ ಇಬ್ಬರು ಸಂಸದರು

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ಮತ್ತು ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್ ಕುಮಾರ್ ಹೆಗಡೆ ವಿಧಾನಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಕೋರಿ ಈಶ್ವರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಪತ್ರ ಪಡೆದಿರುವ ಈಶ್ವರಪ್ಪ ಕೆಲವು ದಿನಗಳ ಬಳಿಕ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಂಸದ ಪಿ.ಸಿ.ಮೋಹನ್ ಬೆಂಗಳೂರಿನ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿದ್ದಾರೆ. ಹಾಲಿ ಗಾಂಧಿನಗರ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ, ಯುವ ನಾಯಕ ದಿನೇಶ್ ಗುಂಡೂರಾವ್ ಅಲ್ಲಿನ ಶಾಸಕರು. ಮುಂದಿನ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಅವರು ಮತ್ತೊಮ್ಮೆ ಸ್ಪರ್ಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂತಹ ಕ್ಷೇತ್ರದಿಂದ ಪಿ.ಸಿ.ಮೋಹನ್ ವಿಧಾನಸಭಾ ಚುನಾವಣೆಯ ಟಿಕೆಟ್ ಬಯಸಿ ಈಶ್ವರಪ್ಪ ಮೊರೆ ಹೋಗಿದ್ದಾರೆ.
ಇನ್ನು ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್ ಕುಮಾರ್ ಹೆಗಡೆ ಸಿರಸಿ-ಸಿದ್ದಾಪುರ ಕ್ಷೇತ್ರದಿಂದ ಟಿಕೆಟ್ ಬಯಸಿದ್ದಾರೆ. ಹಾಲಿ ಈ ಕ್ಷೇತ್ರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಶಾಸಕರು. ಮುಂದಿನ ಚುನಾವಣೆಯಲ್ಲಿಯೂ ಇದೇ ಕ್ಷೇತ್ರದಿಂದ ಕಾಗೇರಿಯವರು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಆದರೆ, ಅನಂತ್ ಕುಮಾರ್ ಹೆಗಡೆ ಈ ಕ್ಷೇತ್ರದ ಟಿಕೆಟ್ ಬಯಸಿದ್ದಾರೆ.
2008ರ ವಿಧಾನಸಭಾ ಚುನಾವಣೆಯಲ್ಲಿಯೇ ಈ ಇಬ್ಬರು ಸಂಸದರು ವಿಧಾನಸಭಾ ಟಿಕೆಟ್ ನೀಡುವಂತೆ ಪಕ್ಷದ ಪ್ರಮುಖರನ್ನು ಮನವಿ ಮಾಡಿದ್ದರು. ಆಗ ಅನೇಕ ಕಾರಣಗಳನ್ನು ನೀಡಿ ಟಿಕೆಟ್ ನೀಡುವುದಿಲ್ಲವೆಂದು ಬಿಜೆಪಿ ನಾಯಕರು ಇಬ್ಬರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಸದ್ಯ ಚುನಾವಣೆ ಹತ್ತಿರವಾಗಿರುವುದರಿಂದ ಮತ್ತೊಮ್ಮೆ ಇಬ್ಬರು ಸಂಸದರು ತಮ್ಮ ಪ್ರಯತ್ನ ಆರಂಭಿಸಿದ್ದಾರೆ.
ಬೆಜೆಪಿ ನಾಯಕರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದರ ಮೇಲೆ ಇಬ್ಬರ ಭವಿಷ್ಯ ಅಡಗಿದೆ. ಈಗಾಗಲೇ ಶಾಸಕರ ರಾಜೀನಾಮೆಯಿಂದ ಸಂಕಟಕ್ಕೆ ಸಿಲುಕಿರುವ ಬಿಜೆಪಿಗೆ, ಸಂಸದರು ಟಿಕೆಟ್ ಕೇಳಿ ಮನವಿ ಮಾಡುತ್ತಿರುವುದರಿಂದ ಹೊಸ ಸವಾಲು ಎದುರಾಗುವ ಲಕ್ಷಣಗಳಿವೆ.












Click it and Unblock the Notifications