ಶಾಸಕರಿಗೆ ಕಾಂಗ್ರೆಸ್ಸಿನ ಬಾಗಿಲು ತೆರೆಯೇ ಸೇಸಮ್ಮ
ಬೆಂಗಳೂರು, ಫೆ 21 : ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರಿಗಳಿಗೆ ಪರ್ವ ಕಾಲ. ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಲಾಂಗ್ ಜಂಪ್ ಮಾಡುವವರಿಗೆ ಪಕ್ವವಾದ ಕಾಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತಗಳಿಸತ್ತೆ ಎಂಬ "ವಿಶ್ವಾಸ"ವನ್ನು ಅನೇಕರು ಇಟ್ಟುಕೊಂಡಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಳ್ಳಲು ಅನೇಕರು ತುದಿಗಾಲಲ್ಲಿ ನಿಂತಿದ್ದಾರೆ. ಅಷ್ಟಕ್ಕೂ "ಕಾಂಗ್ರೆಸ್ಸಿಗೆ ಬನ್ನಿ ಬದಲಾವಣೆ ತನ್ನಿ" ಎಂಬುದು ಕಾಂಗೈನ ಧೇಯವಾಕ್ಯವೇ ಆಗಿದೆ ತಾನೇ!
ಕೆಪಿಸಿಸಿ ವಕ್ತಾರರು ಹೇಳುವಂತೆ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಟಿಕೆಟ್ ಕೋರಿ ಸುಮಾರು 24 ಸಾವಿರ ಅರ್ಜಿಗಳು ಬಂದಿವೆ. ಅದರಲ್ಲಿ ಕಾಂಗ್ರೆಸ್ಸೇತರ ರಾಜಕಾರಣಿಗಳು, ಹಾಲಿ ಶಾಸಕರು ಗುಜರಾಯಿಸಿದ ಅರ್ಜಿಗಳು ಸುಮಾರು 30 ರಷ್ಟು ಇವೆ. ಇವರೆಲ್ಲ ಇತರ ಪಕ್ಷಗಳಿಂದ, ಮುಖ್ಯವಾಗಿ ಭಾಜಪದಿಂದ ಕಾಂಗೈಗೆ ಜಿಗಿಯುವವರೇ ಆಗಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಮರು ಸ್ಪರ್ಧೆ ಬಯಸುವವರು, ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಕಳೆದ ಚುನಾವಣೆಯಲ್ಲಿ ಸೋತವರು, ಸೆಲೆಬ್ರಿಟಿಗಳು ಹೀಗೆ ಹತ್ತು ಹಲವು ಬಗೆಯ ಮಂದಿ ಕಾಂಗ್ರೆಸ್ ಪಕ್ಷದ ಟಿಕೆಟಿನಿಂದ ಸ್ಪರ್ಧಿಸಿ ರಾಜಕೀಯದಲ್ಲಿ ನೆಲೆಕಾಣಲು ಹಂಬಲಿಸುತ್ತಿದ್ದಾರೆ. "ಗೆಲ್ಲುತ್ತದೆ" ಎಂದು ಭಾವಿಸಲಾದ ಎತ್ತಿನ ಬಾಲ ಹಿಡಿಯುವ ನಮ್ಮ ಕೆಲವು ರಾಜಕೀಯ ನಾಯಕರುಗಳು ತಮ್ಮ ರಾಜಕೀಯ ಜೀವನದುದ್ದಕ್ಕೂ ಒಂದೇ ಪಕ್ಷದ ಟಿಕೆಟಿನಿಂದ ಸ್ಪರ್ಧಿಸಿದ ಉದಾಹರಣೆ ವಿರಳ. ಅದರಲ್ಲಿ ಹಾಲಿ ಬಿಜೆಪಿ ಶಾಸಕರು, ಸಚಿವರುಗಳು, ಪಕ್ಷೇತರರೂ, ಇದ್ದಾರೆ.
ಇವರನ್ನೆಲ್ಲಾ ಪಕ್ಷಕ್ಕೆ ಸೇರಿಸಿಕೊಳ್ಳಬೇಕೇ? ಟಿಕೆಟ್ ನೀಡಬೇಕೇ ಎಂದು ಚರ್ಚಿಸಲು ದಿಲ್ಲಿ ಕಮಾಂಡ್ ಕೆಪಿಸಿಸಿ ಅಧ್ಯಕ್ಷ ಡಾ ಜಿ. ಪರಮೇಶ್ವರ್ ಮತ್ತು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸಿದೆ. ಸುಮಾರು 10 ಹಾಲಿ ಬಿಜೆಪಿ ಶಾಸಕರು ಹಾಗೂ ಇಬ್ಬರು ಸಚಿವರ ಹೆಸರುಗಳು ಈ ಪಟ್ಟಿಯಲ್ಲಿ ಇದೆ ಎಂದು ಹೇಳಲಾಗಿದ್ದು admission process ಆರಂಭವಾಗಿದೆ.
ಕಾಂಗ್ರೆಸ್ ಪಕ್ಷಕ್ಕೆ ಭರ್ತಿಯಾಗಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಹೇಳಲಾಗುತ್ತಿರುವ ಸಚಿವರು ಮತ್ತು ಶಾಸಕರು ಯಾರು ಎಂಬುದರತ್ತ ಕಣ್ಣುಹಾಯಿಸೋಣ. ಇವರೆಲ್ಲರಿಗೆ ಕಾಂಗೈ ಮಣೆ ಹಾಕುತ್ತಾ ಅಥವಾ ಬಿಡುತ್ತಾ ಎಂಬುದನ್ನು ಶಿವನ ಇಚ್ಛೆಗೆ ಬಿಟ್ಟುಬಿಡೋಣ.

ವಿ ಸೋಮಣ್ಣ (ಬಿಜೆಪಿ)
ವಸತಿ ಸಚಿವರಾಗಿರುವ ವಿ ಸೋಮಣ್ಣ ಯಡಿಯೂರಪ್ಪ ಆಪ್ತ ಬಣದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದವರು. ಕೆಜೆಪಿ ಪಕ್ಷ ಸ್ಥಾಪನೆಯಾದ ಮೇಲೆ ಅವರ ಚಿತ್ತ ಕೆಜೆಪಿಯತ್ತ ಎಂದು ಭಾವಿಸಿದ್ದವರ ನಿರೀಕ್ಷೆ ಹುಸಿಯಾಗಿತ್ತು. ತಾನು ಬಿಜೆಪಿ ಬಿಡುವುದಿಲ್ಲ ಎಂದು ಹೇಳಿಕೊಂಡೇ ಬರುತ್ತಿರುವ ಸೋಮಣ್ಣ ಕಾಂಗ್ರೆಸ್ ಟಿಕೆಟಿನಿಂದ ಬೆಂಗಳೂರು ನಗರ ವ್ಯಾಪ್ತಿಯ ಗೋವಿಂದರಾಜ ನಗರ ಅಥವಾ ರಾಜಾಜಿನಗರ ಕ್ಷೇತ್ರದಿಂದ ಸ್ಪರ್ಧಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ ಎನ್ನುವ ಸುದ್ದಿಯಿದೆ.

ಆನಂದ್ ಅಸ್ನೋಟಿಕರ್ (ಬಿಜೆಪಿ)
ಮೀನುಗಾರಿಕಾ ಸಚಿವರಾಗಿರುವ ಅಸ್ನೋಟಿಕರ್ ಜನಾರ್ಧನ ರೆಡ್ಡಿಯವರ ಭಿನ್ನಮತ ತಾರಕಕ್ಕೇರಿದ್ದಾಗ ರೆಸಾರ್ಟ್ ರಾಜಕಾರಣ ಮಾಡಿದವರು. ಕಾಂಗ್ರೆಸ್ ಪಕ್ಷದ ಟಿಕೆಟಿಗೆ ತೀವ್ರ ಲಾಬಿ ನಡೆಸುತ್ತಿರುವ ಇವರು ಕಾರವಾರ (ಉತ್ತರಕನ್ನಡ ಜಿಲ್ಲೆ) ಕ್ಷೇತ್ರದಿಂದ ಸ್ಪರ್ಧಿಸಲು ಬಯಸುತ್ತಿದ್ದಾರೆ ಎನ್ನುವುದು ಸುದ್ದಿ.

ರಾಜೂ ಗೌಡ (ಬಿಜೆಪಿ)
ನರಸಿಂಹ ನಾಯಕ್ ಆಲಿಯಾಸ್ ರಾಜು ಗೌಡ ಹಾಲಿ ಸಣ್ಣ ಕೈಗಾರಿಕಾ ಸಚಿವರು. ಯಡಿಯೂರಪ್ಪ ಪಕ್ಷ ತೊರೆದ ನಂತರ ಬಿಜೆಪಿಯಿಂದ ದೂರ ಉಳಿದಿರುವ ಇವರು ಮುಂಬರುವ ಚುನಾವಣೆಯಲ್ಲಿ ಸುರಪುರ (ಗುಲ್ಬರ್ಗ ಜಿಲ್ಲೆ) ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿದ್ದಾರೆನ್ನುವ ವರ್ತಮಾನವಿದೆ. ಇವರು ಇಂದು (ಫೆ 21) ಅಥವಾ ನಾಳೆ (ಫೆ 22) ಬಿಜೆಪಿಗೆ ಇಸ್ತೀಫಾ ನೀಡಲಿದ್ದಾರೆ ಎನ್ನುವ ಸುದ್ದಿಯಿದೆ.

ಸಿ ಪಿ ಯೋಗೇಶ್ವರ್ (ಬಿಜೆಪಿ)
ಅರಣ್ಯ ಸಚಿವರಾಗಿರುವ ಸಿ ಪಿ ಯೋಗೇಶ್ವರ್ ಮುಂಬರುವ ಚುನಾವಣೆಯಲ್ಲಿ ಚನ್ನಪಟ್ಟಣ (ರಾಮನಗರ ಜಿಲ್ಲೆ) ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ್ ಟಿಕೆಟಿನಿಂದ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿಯಿದೆ. ಈಗಾಗಲೇ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಲಿದ್ದೇನೆ ಎಂದು ಅಧಿಕೃತ ಹೇಳಿಕೆ ನೀಡಿದ್ದಾರೆ.

ಎಸ್ ಆರ್ ವಿಶ್ವನಾಥ್ (ಬಿಜೆಪಿ)
ಯಲಹಂಕ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ. ಪಕ್ಷದ ಕೆಲವರು ಜೊತೆ ಮುನಿಸಿಕೊಂಡು ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸಲು ಭಾರೀ ಲಾಬಿ ನಡೆಸುತ್ತಿದ್ದಾರೆನ್ನಲಾಗುತ್ತಿದೆ. ಇವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವ ಕ್ಷೇತ್ರ - ಯಲಹಂಕ, ಬೆಂಗಳೂರು ನಗರ ವ್ಯಾಪ್ತಿ.

ಸುರೇಶ್ ಸುರೇಶ್ ಗೌಡ (ಬಿಜೆಪಿ)
ಯಡಿಯೂರಪ್ಪ ಆಪ್ತ ಬಣದಲ್ಲಿ ಕಾಣಿಸಿಕೊಂಡಿದ್ದ ಮತ್ತೊಬ್ಬ ಶಾಸಕ ಸುರೇಶ್ ಗೌಡ. ಈ ಬಾರಿಯ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ (ತುಮಕೂರು ಜಿಲ್ಲೆ) ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸಲು ಬಯಸುತ್ತಿದ್ದಾರೆನ್ನಲಾಗುತ್ತಿದೆ. ಇವರೂ ಹೆಚ್ಚುಕಮ್ಮಿ ಇದೇ ವಾರದಲ್ಲಿ ಬಿಜೆಪಿ ತೊರೆಯುವುದು ಪಕ್ಕಾ ಎನ್ನಲಾಗುತ್ತಿದೆ.

ವೆಂಕಟರಮಣಪ್ಪ (ಪಕ್ಷೇತರ)
ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಬಂದು ಬಿಜೆಪಿ ಸರಕಾರದಲ್ಲಿ ಸಣ್ಣ ಕೈಗಾರಿಕಾ ಸಚಿವರಾಗಿದ್ದ ವೆಂಕಟರಮಣಪ್ಪ ಕಾಂಗ್ರೆಸ್ ಪಕ್ಷದ ಇನ್ನೊಬ್ಬ ಟಿಕೆಟ್ ಆಕಾಂಕ್ಷಿ ಎನ್ನಲಾಗಿದೆ. ಪಾವಗಡ (ತುಮಕೂರು ಜಿಲ್ಲೆ) ಕ್ಷೇತ್ರದಿಂದ ಮತ್ತೆ ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸಲು ಬಯಸುತ್ತಿದ್ದಾರೆ ಎನ್ನುವ ಸುದ್ದಿಯಿದೆ.

ಡಿ ಸುಧಾಕರ್ (ಪಕ್ಷೇತರ)
ಸಮಾಜ ಕಲ್ಯಾಣ ಸಚಿವರಾಗಿದ್ದ ಡಿ ಸುಧಾಕರ್ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಬಂದವರು. ಬ್ಯಾಂಕಿಗೆ ವಂಚಿಸಿದ ಆರೋಪದ ಮೇಲೆ ಸಿಬಿಐ ಇವರ ಮೇಲ್ ಚಾರ್ಜ್ ಶೀಟ್ ಸಲ್ಲಿಸಿದ ನಂತರ ಸಚಿವ ಸ್ಥಾನಕ್ಕೆ ಸುಧಾಕರ್ ರಾಜೀನಾಮೆ ನೀಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಹಿರಿಯೂರು ( ಚಿತ್ರದುರ್ಗ ಜಿಲ್ಲೆ) ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆನ್ನಲಾಗಿದೆ.

ಶಿವರಾಜ್ ತಂಗಡಗಿ (ಪಕ್ಷೇತರ)
ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಶಿವರಾಜ್ ತಂಗಡಗಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ಬೆಂಬಲ ನೀಡಿದ್ದರು. ಈ ಬಾರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಇವರು ಕನಕಗಿರಿ (ಕೊಪ್ಪಳ ಜಿಲ್ಲೆ) ಕ್ಷೇತ್ರದಿಂದ ಮತ್ತೆ ತಮ್ಮ ಸ್ಪರ್ಧಿಸಲು ಬಯಸಿದ್ದಾರೆ.

ಗೂಳಿಹಟ್ಟಿ ಶೇಖರ್ (ಪಕ್ಷೇತರ)
ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಬಂದು ಯುವಜನ ಕ್ರೀಡಾ ಸಚಿವರಾಗಿದ್ದ ಗೂಳಿಹಟ್ಟಿ ಶೇಖರ್ ಸಚಿವ ಸ್ಥಾನದಿಂದ ನನ್ನನ್ನು ಕಿತ್ತುಹಾಕಿದರೆ ಆತ್ಮಹತ್ಯೆಗೂ ಹಿಂಜರಿಯುವುದಿಲ್ಲ ಎಂದು ಶರ್ಟ್ ಹರಿದುಕೊಂಡು ಅಬ್ಬರಿಸಿದ್ದರು. ಆದರೂ ಸ್ಪೀಕರ್ ಬೋಪಯ್ಯ ಇವರನ್ನು ಅಮಾನತು ಮಾಡಿದ್ದರು. ಹೊಸದುರ್ಗ (ಚಿತ್ರದುರ್ಗ ಜಿಲ್ಲೆ) ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟಿನ ಮೂಲಕ ಸ್ಪರ್ಧಿಸಲು ತೀವ್ರ ಲಾಬಿ ನಡೆಸುತ್ತಿದ್ದಾರೆ ಎನ್ನುವುದು ನಂಬಲರ್ಹ ಮೂಲಗಳಿಂದ ಬಂದ ಸುದ್ದಿ.

ನರೇಂದ್ರಸ್ವಾಮಿ (ಪಕ್ಷೇತರ)
ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಬಂದ ಪಿ ಎಂ ನರೇಂದ್ರಸ್ವಾಮಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ. ಮಳವಳ್ಳಿ (ಮಂಡ್ಯ ಜಿಲ್ಲೆ) ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸಲು ಬಯಸಿದ್ದಾರೆನ್ನಲಾಗಿದೆ.












Click it and Unblock the Notifications