ಚಿತ್ರಗಳಲ್ಲಿ : ಹೈದರಾಬಾದ್ ಸರಣಿ ಬಾಂಬ್ ಸ್ಫೋಟ
ಹೈದರಾಬಾದ್, ಫೆ. 21 : ಹೈದರಾಬಾದ್‌ನಲ್ಲಿ ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಸರಣಿ ಸ್ಫೋಟ ಸಂಭವಿಸಿದ್ದು, ಕನಿಷ್ಠ 13 ಜನರು ಸತ್ತಿದ್ದು, 80ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ 20ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಈ ಸ್ಫೋಟದ ಹಿಂದೆ ಇಂಡಿಯನ್ ಮುಜಾಹಿದ್ದಿನ್ ಭಯೋತ್ಪಾದಕ ಸಂಘಟನೆಯ ಕೈವಾಡವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ವೆಂಟಾದ್ರಿ ಮತ್ತು ಕೋನಾರ್ಕ್ ಚಿತ್ರಮಂದಿರ, ದಿಲ್‌ಸುಖ್ ನಗರದಲ್ಲಿರುವ ಬಸ್ ನಿಲ್ದಾಣದ ಬಳಿ ಅಲ್ಲದೆ ಇನ್ನೂ ಎರಡು ಕಡೆ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಶಿರಡಿ ಸಾಯಿ ಮಂದಿರದ ಬಳಿ ಕೂಡ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಪಾದಚಾರಿ ಮೇಲ್ಸೇತುವೆ ಮೇಲಿ ಟಿಫಿನ್ ಬಾಕ್ಸಲ್ಲಿ ಇಡಲಾಗಿದ್ದ ಒಂದು ಬಾಂಬನ್ನು ಬಾಂಬ್ ನಿಷ್ಕ್ರಿಯದಳ ನಿಷ್ಕ್ರಿಯಗೊಳಿಸಿದೆ.
ಬೆಂಗಳೂರಿನಲ್ಲಿ ಹೈ ಅಲರ್ಟ್ : ಹೈದರಾಬಾದ್‌ನಲ್ಲಿ ಸರಣಿ ಸ್ಫೋಟ ಸಂಭವಿಸುತ್ತಿದ್ದಂತೆ ಬೆಂಗಳೂರಿನಲ್ಲಿಯೂ ಹೈ ಅಲರ್ಟ್ ಘೋಷಿಸಲಾಗಿದ್ದು, ಜನನಿಬಿಡ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬೆಂಗಳೂರು ಅಲ್ಲದೆ ಇಡೀ ದೇಶದ ಪ್ರಮುಖ ನಗರಗಳಲ್ಲಿ ಕಟ್ಟೆಚ್ಚರದಿಂದ ಇರಬೇಕೆಂದು ಕೇಂದ್ರ ಗೃಹ ಮಂತ್ರಾಲಯ ಆದೇಶಿಸಿದೆ.
ವಿವಾದಿನ ಶಾಸಕ ಓವೈಸಿಯ ಪ್ರಚೋದನಾತ್ಮಕ ಹೇಳಿಕೆಯಿಂದ ಉದ್ರಿಕ್ತವಾಗಿರುವ ಹೈದರಾಬಾದ್‌ನಲ್ಲಿ, ಮುಸ್ಲಿಂ ಭಯೋತ್ಪಾದಕ, ಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರುವನ್ನು ನೇಣಿಗೇರಿಸಿದ ಕೆಲವೇ ದಿನಗಳಲ್ಲಿ ಈ ಪ್ರಬಲ ಬಾಂಬ್ ಸ್ಪೋಟ ಸಂಭವಿಸಿವೆ. 2007ರ ಆಗಸ್ಟ್ 25ರಂದು ಕಳೆದ ಬಾರಿ ಸರಣಿ ಸ್ಫೋಟಗಳು ಹೈದರಾಬಾದ್‌ನಲ್ಲಿ ಸಂಭವಿಸಿತ್ತು. ಆಗ 42 ಜನರು ಸಾವಿಗೀಡಾಗಿದ್ದರು.

ಇಂಡಿಯನ್ ಮುಜಾಹಿದ್ದಿನ್ ಸಂಘಟನೆ ಕೈವಾಡ
ಬಾಂಬ್ ಸ್ಫೋಟಗೊಳಿಸಲು ಸೈಕಲು ಬಳಸಲಾಗಿದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ಒಂದು ಪ್ರದೇಶದಲ್ಲಿ ಹೀರೊ ಹೊಂಡಾ ಬೈಕ್‌ನ್ನು ಕೂಡ ಬಳಸಿ ಬಾಂಬ್ ಸ್ಫೋಟಿಸಲಾಗಿದೆ. ಈ ಸ್ಫೋಟಗಳ ಹಿಂದೆ ಇಂಡಿಯನ್ ಮುಜಾಹಿದ್ದಿನ್ ಸಂಘಟನೆಯ ಕೈವಾಡವಿರಬಹುದು ಎಂದು ಶಂಕಿಸಲಾಗಿದೆ.

ದಿಕ್ಕಾಪಾಲಾಗಿ ಓಡಿದ ಜನರು
ಸರಣಿ ಬಾಂಬ್ ಸ್ಫೋಟ ಸಂಭವಿಸುತ್ತಿದ್ದಂತೆ ಜನ ದಿಕ್ಕಾಪಾಲಾಗಿ ಓಡಲು ಆರಂಭಿಸಿದ್ದಾರೆ. ಜನರ ತಳ್ಳಾಟ, ನೂಕಾಟದಲ್ಲಿ ಅನೇಕ ಜನರು ಗಾಯಗೊಂಡಿದ್ದಾರೆ. ಜನರು ಸಿಕ್ಕಾಪಟ್ಟೆ ಜಮಾಯಿಸಿದ್ದರಿಂದ ಪೊಲೀಸರು ಜನರನ್ನು ಚೆದುರಿಸಲು ಹರಸಾಹಸ ಪಡಬೇಕಾಯಿತು.

ಕಳೆದುಕೊಂಡ ಬಂಧುವಿಗಾಗಿ ಆಕ್ರಂದನ
ಸ್ಫೋಟದ ಸುದ್ದಿ ನಗರದಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬಿದೆ. ತಮ್ಮ ಆತ್ಮೀಯರನ್ನು ಕಳೆದುಕೊಂಡಿದ್ದು ತಿಳಿಯುತ್ತಿದ್ದಂತೆ ಬಂಧುಗಳ ಆಕ್ರಂದನ ಮುಗಿಲುಮುಟ್ಟಿತ್ತು. ಸತ್ತವರಿಗಾಗಿ ಕೇಂದ್ರ ಸರಕಾರ 2 ಲಕ್ಷ ರು. ಮತ್ತು ಗಾಯಗೊಂಡವರಿಗೆ 50 ಸಾವಿರ ರು. ಪರಿಹಾರ ಘೋಷಿಸಿದೆ.

ಆಸ್ಪತ್ರೆಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ
ಪ್ರಬಲ ಸ್ಫೋಟಗಳಲ್ಲಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅವರನ್ನು ನಾನಾ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಸ್ಫೋಟದ ತೀವ್ರತೆ ಯಾವ ಮಟ್ಟದ್ದಿತ್ತೆಂದರೆ ಜನರ ದೇಹದ ಭಾಗಗಳು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿದ್ದವು.

ಗಾಯಗೊಂಡವರಿಗೆ ಚಿಕಿತ್ಸೆ
ಭಾರತ ಬಂದ್ ದಿನವೇ ಸ್ಫೋಟಗಳು ಸಂಭವಿಸಿದ್ದರೂ ಈ ಜನನಿಬಿಡ ಪ್ರದೇಶಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಅಂಗಡಿ ಮುಂಗಟ್ಟುಗಳು ತೆರೆದುಕೊಂಡಿದ್ದವು. ಇದರಿಂದಾಗಿ ಸಾವಿನ ಮತ್ತು ಗಾಯಗೊಂಡವರ ಸಂಖ್ಯೆ ಹೆಚ್ಚಾಗಿದೆ.

ಸ್ಫೋಟದ ಸ್ಥಳಕ್ಕೆ ಮುಖ್ಯಮಂತ್ರಿ ಭೇಟಿ
ಸ್ಫೋಟದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಆಂಧ್ರಪ್ರದೇಶದ ಮುಖ್ಯಮಂತ್ರಿ ಕಿರಣ್ ಕುಮಾರ್ ಅವರು ಪರಿಶೀಲನೆ ನಡೆಸಿದರು. ಸತ್ತವರ ಕುಟುಂಬದವರಿಗೆ ಸಂತಾಪ ವ್ಯಕ್ತಪಡಿಸಿದ ಅವರು ಗಾಯಗೊಂಡರಿಗೆ ಎಲ್ಲ ರೀತಿಯ ಚಿಕಿತ್ಸೆ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

ಕೇಂದ್ರ ಗೃಹ ಸಚಿವರಿಗೆ ಮೊದಲೇ ತಿಳಿದಿತ್ತಂತೆ
ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರಿಗೆ ಸ್ಫೋಟದ ಬಗ್ಗೆ ಎರಡು ದಿನ ಮೊದಲೇ ತಿಳಿದುಬಂದಿತ್ತಂತೆ. ಈ ಬಗ್ಗೆ ಎಲ್ಲ ರಾಜ್ಯಗಳಿಗೂ ಮಾಹಿತಿ ರವಾನಿಸಿದ್ದರಂತೆ. ಆದರೂ, ಈ ಅವಘಡ ಸಂಭವಿಸಿದೆ. ಗಡ್ಡಕ್ಕೆ ಬೆಂಕಿ ಬಿದ್ದಾಗಿದೆ, ನೀರಿಗಾಗಿ ಬಾವಿ ತೋಡಲಾಗುತ್ತಿದೆ.

ಜನರನ್ನು ಸಂಭಾಳಿಸುವುದೇ ದೊಡ್ಡಕೆಲಸ
ತಮ್ಮ ಬಂಧುಗಳ ಬಗ್ಗೆ ಮಾಹಿತಿ ಪಡೆಯಲು ಜನರು ಆಸ್ಪತ್ರೆಗಳಿಗೆ ನುಗ್ಗಿ ಬಂದಿದ್ದರಿಂದ ಪೊಲೀಸರು ಭಾರೀ ಹರಸಾಹಸ ಪಡಬೇಕಾಯಿತು.

ಅಂಗಡಿ ಮುಂಗಟ್ಟುಗಳು ಛಿದ್ರಛಿದ್ರ
ಬಾಂಬ್ ಸ್ಫೋಟಿಸಲು ರಿಮೋಟ್ ಕಂಟ್ರೋಲ್ ಬದಲು ಟೈಮರ್ ಬಳಸಲಾಗಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಸ್ಫೋಟದ ಪ್ರಖರತೆ ಯಾವ ಮಟ್ಟದ್ದಿತ್ತೆಂದರೆ, ಸುತ್ತಲಿನ ಅಂಗಡಿ ಮುಂಗಟ್ಟುಗಳೆಲ್ಲ ಛಿದ್ರಛಿದ್ರವಾಗಿವೆ. ಇನ್ನು ಈ ದಾಳಿಗೆ ಸಿಕ್ಕ ಜನರ ಪಾಡಂತೂ ಕೇಳುವುದೇ ಬೇಡ.

ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ದೃಶ್ಯ
ಈ ದುರ್ಘಟನೆಯಲ್ಲಿ ಸತ್ತವರ ಕುಟುಂಬಕ್ಕೆ ತಲಾ 6 ಲಕ್ಷ ರು. ಕೊಡುವುದಾಗಿ ಮುಖ್ಯಮಂತ್ರಿ ಕಿರಣ್ ಕುಮಾರ್ ಘೋಷಿಸಿದ್ದಾರೆ. ಹಾಗು ಗಾಯಗೊಂಡವರ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ನುಡಿದಿದ್ದಾರೆ.

ಎಲ್ಲೆಲ್ಲೂ ರಕ್ತ, ಎಲ್ಲೆಲ್ಲೂ ಆಕ್ರಂದನ
ಬಾಂಬ್ ಸ್ಫೋಟದ ಹೊಡೆತಕ್ಕೆ ಎಲ್ಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಎಲ್ಲೆಂದರಲ್ಲಿ ರಕ್ತದೋಕುಳಿ. ಈ ಮಾರಣಹೋಮದಿಂದಾದರೂ ಕೇಂದ್ರ ಸರಕಾರ ಎಚ್ಚೆತ್ತುಕೊಳ್ಳುವುದೆ? ಎಂದು ಜನರು ಆಕ್ರೋಶಭರಿತರಾಗಿ ಕೇಳುತ್ತಿದ್ದಾರೆ.
7.30ರ ವರದಿ : ಗುರುವಾರ ಸಂಜೆ 7.10 ಗಂಟೆಗೆ ಹೈದರಾಬಾದ್‌ನಲ್ಲಿ ಮೂರು ಕಡೆ ಸರಣಿ ಸ್ಫೋಟ ಸಂಭವಿಸಿದ್ದು, 7ರಿಂದ 8 ಜನ ಸ್ಥಳದಲ್ಲಿಯೇ ಸತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಯಲ್ಲಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸ್ ಠಾಣೆಯ ಬಳಿಯಿರುವ ವೆಂಕಟಾದ್ರಿ ಚಿತ್ರಮಂದಿರ, ಕೋನಾರ್ಕ್ ಚಿತ್ರಮಂದಿರ ಮತ್ತು ದಿಲ್‌ಸುಖ್ ಬಸ್ ನಿಲ್ದಾಣದ ಬಳಿ ಮೂರು ಸ್ಫೋಟಗಳು ಸಂಭವಿಸಿವೆ. ಜನನಿಬಿಡ ಪ್ರದೇಶಗಳಲ್ಲಿ ಸ್ಫೋಟ ಸಂಭವಿಸುತ್ತಿದ್ದಂತೆ ಜನ ದಿಕ್ಕಾಪಾಲಾಗಿ ಓಡಲು ಶುರು ಮಾಡಿದ್ದರಿಂದ ಹಲವಾರು ಜನರು ಗಾಯಗೊಂಡಿದ್ದಾರೆ.
ಭಾರತ್ ಬಂದ್ ಇದ್ದರೂ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಈ ಪ್ರದೇಶದಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು ತೆರೆದುಕೊಂಡಿದ್ದವು ಮತ್ತು ಸಹಜವಾಗಿ ಪ್ರದೇಶ ಜನನಿಬಿಡವಾಗಿತ್ತು. ಆರಂಭದಲ್ಲಿ ಸಿಲಿಂಡರ್ ಸ್ಫೋಟಗೊಂಡಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಬಾಂಬ್ ಸ್ಫೋಟ ಆಗಿರುವುದನ್ನು ಪೊಲೀಸರು ದೃಢಪಡಿಸಿದ್ದಾರೆ.
ಬಾಂಬನ್ನು ಬೈಕ್ ಮತ್ತು ಟಿಫಿನ್ ಬಾಕ್ಸ್ ನಲ್ಲಿ ಇಡಲಾಗಿತ್ತು ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ಕೂಡಲೆ ಇಡೀ ಸ್ಥಳವನ್ನು ಪೊಲೀಸರು ಸುತ್ತುವರಿದಿದ್ದು, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications