ನೀತಿ ಸಂಹಿತೆ ಉಲ್ಲಂಘಿಸಿ ಸಿಕ್ಕಿಬಿದ್ದ ಈಶ್ವರಪ್ಪ

ರಾಜ್ಯದಲ್ಲಿ ಮಾ.7ರಂದು ನಗರ ಸ್ಥಳೀಯ ಸಂಸ್ಥೆ ಮತ್ತು ಏಳು ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಘೋಷಿಸಿ ಫೆ.15ರಿಂದಲೇ ಚುನಾವಣಾ ಅಧಿಸೂಚನೆ ಜಾರಿಗೊಳಿಸಿದೆ. ಇದನ್ನು ಮರೆತು ತಮ್ಮ ತವರು ಜಿಲ್ಲೆ ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ನೀತಿ ಸಂಹಿತೆ ಉಲ್ಲಂಘಿಸಿ ಸಿಕ್ಕಿಬಿದ್ದಿದ್ದಾರೆ.
ಬಿಜೆಪಿ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿಯಾದ ಈಶ್ವರಪ್ಪ ಫೆ.19ರಂದು ಶಿವಮೊಗ್ಗ ನಗರದಲ್ಲಿ ಶಿವಾಜಿ ಮರಾಠ ಟ್ರಸ್ಟ್ ನ ಸಮುದಾಯ ಭವನದ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಸಂಜೆ 5.30ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಬರೋಬ್ಬರಿ ಎರಡು ಗಂಟೆ ತಡವಾಗಿ ಬಂದ ಈಶ್ವರಪ್ಪ ಶಂಕುಸ್ಥಾಪನೆ ಮಾಡಿ ಗಡಿಬಿಡಿಯಿಂದ ಹೊರಟು ಹೋಗಿದ್ದಾರೆ.
ಪತ್ರಿಕೆಗಳಲ್ಲಿ ಈಶ್ವರಪ್ಪ ಶಂಕುಸ್ಥಾಪನೆ ಮಾಡಿದ ಫೋಟೋ ದೊಡ್ಡದಾಗಿ ಪ್ರಕಟಗೊಂಡಿದೆ. ಇದನ್ನು ಕಂಡ ಜಿಲ್ಲಾ ಚುನಾವಣಾಧಿಕಾರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಶಂಕುಸ್ಥಾಪನೆ ಮಾಡಿದ ಬಗ್ಗೆ ತನಿಖೆ ನಡೆಸಿ ಎಂದು ಉಪ ವಿಭಾಗಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದರಿಂದ ಈಶ್ವರಪ್ಪ ಮೇಲೆ ನೀತಿಸಂಹಿತಿ ಉಲ್ಲಂಘನೆ ದೂರು ದಾಖಲಾಗುವ ಸಂಭವವಿದೆ. ಚುನಾವಣಾ ತಯಾರಿಯಲ್ಲಿರುವ ಈಶ್ವರಪ್ಪ ಗಡಿಬಿಡಿಯಲ್ಲಿ ಮಾಡಿದ ಕಾರ್ಯ ಈಗ ದೂರಿನ ರೂಪದಲ್ಲಿ ಅವರನ್ನು ಹಿಂಬಾಲಿಸಿಕೊಂಡು ಬಂದಿದೆ.(ಸ್ಥಳೀಯ ಸಂಸ್ಥೆ ಚುನಾವಣಾ ವೇಳಾಪಟ್ಟಿ )












Click it and Unblock the Notifications