ಸ್ಥಳೀಯ ಸಂಸ್ಥೆ ಚುನಾವಣಾ ಹೊಣೆ ನಾಯಕರ ಹೆಗಲಿಗೆ

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಸೋಮವಾರ ನಡೆದ ಮಹತ್ವದ ಸಭೆಯಲ್ಲಿ ಚುನಾವಣೆ ಗೆಲ್ಲುವುದಕ್ಕೆ ಬೇಕಾದ ರಣತಂತ್ರ ರೂಪಿಸಲಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಆಯಾ ಭಾಗದ ಕಾಂಗ್ರೆಸ್ ನಾಯಕರಿಗೆ ಹೆಗಲಿಗೆ ವಹಿಸಲಾಗಿದೆ.
ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಶಾಸಕರಿಗೆ ವಿಧಾನಸಭಾ ಚುನಾವಣಾ ಟಿಕೆಟ್ ನೀಡುವುದಾಗಿ ಪಕ್ಷದ ಅಧ್ಯಕ್ಷ ಜಿ.ಪರಮೇಶ್ವರ್ ಘೋಷಿಸಿದ್ದಾರೆ. ಸೋಮವಾರ ಫೆ.18ರಂದು ನಡೆದ ಸಭೆಯಲ್ಲಿ ಶಾಸಕರು, ಮುಖಂಡರನ್ನು ಆಯಾ ಕ್ಷೇತ್ರದ ಚುನಾವಣಾ ವೀಕ್ಷಕರನ್ನಾಗಿ ನೇಮಿಸಲಾಗಿದೆ.
ಕೇಂದ್ರ ಸಚಿವರಾಗಿರುವ ವೀರಪ್ಪಮೋಯ್ಲಿ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ರಾಜ್ಯ ಮುಖಂಡರಾದ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್, ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಲವಾರು ನಾಯಕರಿಗೆ ಜಿಲ್ಲೆಗಳ ಉಸ್ತುವಾರಿ ವಹಿಸಲಾಗಿದೆ. ಯಾವ ನಾಯಕರು ಯಾವ ಜಿಲ್ಲೆಯ ವೀಕ್ಷರರಾಗಿದ್ದಾರೆ ತಿಳಿಯೋಣ ಬನ್ನಿ.
ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜವಾಬ್ದಾರಿಯನ್ನು ಕೇಂದ್ರ ಸಚಿವ ವೀರಪ್ಪ ಮೋಯ್ಲಿ ಮತ್ತು ಎಸ್.ಆರ್.ಮೋರೈ ಅವರಿಗೆ ವಹಿಸಲಾಗಿದೆ. ರಾಮನಗರ ಜಿಲ್ಲೆಯನ್ನು ಡಿ.ಕೆ.ಶಿವಕುಮಾರ್ ಮತ್ತು ಮುನಿವೆಂಕಟರೆಡ್ಡಿ ಅವರ ಉಸ್ತುವಾರಿಗೆ ನೀಡಲಾಗಿದೆ. ದಾವಣಗೆರೆ ಜಿಲ್ಲೆಯ ಜವಾಬ್ದಾರಿಯನ್ನು ಶಾಮನೂರು ಶಿವಶಂಕರಪ್ಪ ಮತ್ತು ಐ.ಜಿ.ಸ್ಯಾಂಡಿ ಅವರಿಗೆ ವಹಿಸಲಾಗಿದೆ.
ವಿಧಾನಸಭಾ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಮತ್ತು ಸಗೀರ್ ಅಹ್ಮದ್ ಅವರನ್ನು ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ವೀಕ್ಷರನ್ನಾಗಿ ನೇಮಕ ಮಾಡಲಾಗಿದೆ. ಕೋಲಾರ ಜಿಲ್ಲೆಗೆ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಮತ್ತು ನಸೀರ್ ಅಹ್ಮದ್ ವೀಕ್ಷಕರಾಗಿದ್ದಾರೆ.
ಗುಲ್ಬರ್ಗ ಜಿಲ್ಲೆಯ ಉಸ್ತುವಾರಿಯನ್ನು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ವೀರ ಕುಮಾರ್ ಪಾಟೀಲ್ ಅವರಿಗೆ ವಹಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಚುನಾವಣಾ ಹೊಣೆ ಜನಾರ್ಧನ ಪೂಜಾರಿ ಮತ್ತು ಟಿ.ಜಾನ್ ಅವರ ಹೆಗಲೇರಿದೆ. ಉತ್ತರ ಕನ್ನಡ ಜಿಲ್ಲೆಯ ವೀಕ್ಷಕರಾಗಿ ಕೆಪಿಸಿಸಿ ಮಾಜಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ನೇಮಕಗೊಂಡಿದ್ದಾರೆ.
ಗಡಿನಾಡು ಬಳ್ಳಾರಿ ಜಿಲ್ಲೆಗೆ ಅಲ್ಲಂ ವೀರಭದ್ರಪ್ಪ, ಅನಿಲ್ ಲಾಡ್, ಆರ್.ವಿ.ವೆಂಕಟೇಶ್ ಅವರನ್ನು ವೀಕ್ಷರನ್ನಾಗಿ ನೇಮಿಸಲಾಗಿದೆ. ಬೀದರ್ ಜಿಲ್ಲೆಯ ಉಸ್ತುವಾರಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಮತ್ತು ಪ್ರಕಾಶ್ ರಾಥೋಡ್ ಅವರ ಹೆಗಲೇರಿದೆ. ವೀರಣ್ಣ ಮತ್ತಿಕಟ್ಟಿ ಮತ್ತು ಮಹಂತೇಶ್ ಕೌಜಲಗಿ ಅವರಿಗೆ ಧಾರವಾಡ ಗ್ರಾಮಾಂತರ ಜಿಲ್ಲೆಯ ಹೊಣೆಗಾರಿಗೆ ನೀಡಲಾಗಿದೆ.
ಈ ಮೂಲಕ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರನ್ನು ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸುವ ಮೂಲಕ, ಪಕ್ಷದ ಆಂತರಿಕ ಭಿನ್ನಮತ ನಿವಾರಿಸಲು ತಂತ್ರ ರೂಪಿಸಿರುವುದಂತು ಸತ್ಯ.











Click it and Unblock the Notifications