ನಾನಾಗಲಿ, ಕೆಜೆಪಿಯಾಗಲಿ ಬಿಜೆಪಿ ಜತೆ ವಿಲೀನವಾಗಲ್ಲ

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿಯೊಂದಿಗೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಲಿದ್ದೇವೆ ಎಂಬುದು ಊಹಾಪೋಹ. ಬಿಜೆಪಿಯಿಂದ ಹೊರಬಂದಿರುವ ನಾನು ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಇಂಥ ಸುದ್ದಿಗಳಿಗೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಗಮನಹರಿಸದಂತೆ ಸಲಹೆ ಮಾಡಿದರು.
ಬಿಜೆಪಿ ನಾಯಕರು ಉದ್ದೇಶಪೂರ್ವಕವಾಗಿ ಇಂತಹ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ನಾನೇ ಸ್ವತಃ ಪ್ರಾದೇಶಿಕ ಪಕ್ಷ ಕಟ್ಟಿರುವಾಗ ಬಿಜೆಪಿಯೊಂದಿಗೆ ಏಕೆ ಮೈತ್ರಿ ಮಾಡಿಕೊಳ್ಳಲಿ ಎಂದು ಯಡಿಯೂರಪ್ಪ ಮಾಧ್ಯಮದವರನ್ನೇ ಪ್ರಶ್ನೆ ಮಾಡಿದರು. ಈವರೆಗೂ ನನ್ನ ಜೊತೆ ಬಿಜೆಪಿಯ ಯಾವುದೇ ರಾಷ್ಟ್ರೀಯ ನಾಯಕರು ಮಾತುಕತೆ ನಡೆಸಿಲ್ಲ.
ಚುನಾವಣೆಯಲ್ಲಿ ಆ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ನಾನು ಯೋಚನೆ ಮಾಡಿಲ್ಲ. 224 ಕ್ಷೇತ್ರಗಳಲ್ಲಿ ಕೆಜೆಪಿ ಸ್ಪರ್ಧೆ ಮಾಡಲಿದೆ. ಚುನಾವಣೆಗೂ ಮುನ್ನ ಮೈತ್ರಿ ಮಾಡಿಕೊಳ್ಳದಿರಲು ತೀರ್ಮಾನಿಸಲಾಗಿದೆ. ಫಲಿತಾಂಶ ಬಂದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಮಾಜಿ ಸಿಎಂ ಯಡಿಯೂರಪ್ಪ ಜತೆಗೆ ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಬಿಜೆಪಿ ಆಲೋಚಿಸುತ್ತಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜ್ ನಾಥ್ ಸಿಂಗ್ ಸುಳಿವು ನೀಡಿದ್ದಾರೆ ಎಂದು ದೈನಿಕವೊಂದು ವರದಿ ಮಾಡಿತ್ತು. ಈ ಬಗ್ಗೆ ರಾಜ್ಯ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ, ಬಿಜೆಪಿ ಜೊತೆ ಮೈತ್ರಿ ಸಾಧ್ಯವೇ ಇಲ್ಲ ಎಂದಿದ್ದಾರೆ.
ಕಾವೇರಿ ನೀರು ಹಂಚಿಕೆ: ಜಲಾಶಯದಲ್ಲಿ ನೀರಿಲ್ಲದಿದ್ದರೂ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಟ್ಟು ಕಾವೇರಿ ಕೊಳದ ಜನತೆಗೆ ಮೋಸ ಮಾಡಿದ್ದಾರೆ. ಈಗ ನೀರು ಹರಿದು ಹೋದ ಮೇಲೆ ಪ್ರಧಾನಿ ಬಳಿ ಸರ್ವ ಪಕ್ಷ ನಿಯೋಗ ಕೊಂಡೊಯ್ದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಸುಪ್ರೀಂಕೋರ್ಟ್ ಬರುತ್ತಿದ್ದಂತೆ ಮುಖ್ಯಮಂತ್ರಿ ಪ್ರಧಾನಿ ನಿಯೋಗದ ಬಳಿ ಸರ್ವಪಕ್ಷದ ನಿಯೋಗ ಕೊಂಡೊಯ್ಯಬೇಕಿತ್ತು. ಕುರ್ಚಿ ಉಳಿಸುವ ಆಸೆಗಾಗಿ ಸಿಎಂ ನೀರು ಬಿಟ್ಟಿದ್ದಾರೆ. ಜನತೆ ಯಾವುದೇ ಕಾರಣಕ್ಕೂ ಅವರನ್ನು ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದರು.
ಈ ನಡುವೆ ಜಗದೀಶ್ ಹಿರೇಮನಿ ಅವರನ್ನು ಕೆಜೆಪಿ ಯುವ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಶೀಘ್ರದಲ್ಲೇ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸೆಲ್(SIT ಸೆಲ್) ಆರಂಭಿಸಲಾಗುತ್ತಿದ್ದು, ವೃತ್ತಿಪರರು ಕೆಜೆಪಿ ಸೇರುವ ಮೂಲಕ ಯಡಿಯೂರಪ್ಪ ಅವರ ಕಲ್ಯಾಣ ಕರ್ನಾಟಕದ ಕನಸು ನನಸು ಮಾಡಬೇಕಾಗಿ ಕೋರಿದ್ದಾರೆ. ಆಸಕ್ತರು ತಮ್ಮ ಸ್ವವಿವರ ಗಳೊಂದಿಗೆ ಸಂಜಯ ಗೌಡರ್ ಗೆ ಇಮೇಲ್ ಮಾಡಬಹುದು












Click it and Unblock the Notifications