ಸರ್ಕಾರಿ ವೈದ್ಯರ ಮುಷ್ಕರಕ್ಕೆ ಅಮಾಯಕರ ಬಲಿ

ಆರೋಗ್ಯ ಸಚಿವ ಅರವಿಂದ್ ಲಿಂಬಾವಳಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ರಾಮದಾಸ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಮಗೆ ಮಾತನಾಡಲು ಸೂಕ್ತ ಅವಕಾಶವೇ ನೀಡಲಿಲ್ಲ ಎಂದು ವೈದ್ಯಾಧಿಕಾರಿಗಳ ಸಂಘದ ಮುಖ್ಯಸ್ಥ ಡಾ. ರವೀಂದ್ರ ಹೇಳಿದ್ದಾರೆ.
ಬೇಡಿಕೆಗಳು ಈಡೇರುವ ತನಕ ಹೋರಾಟ ಮುಂದುವರೆಯಲಿದೆ. ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ಇಚ್ಛೆ ಸರ್ಕಾರಕ್ಕೆ ಇಲ್ಲ ಎಂದು ರವೀಂದ್ರ ಹೇಳಿದರು.ಈ ನಡುವೆ, ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದ ಕಾರಣ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ವಿವಿಧ ಬೇಡಿಕೆಗಳ ಪೂರೈಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಆಯುಷ್ ವೈದ್ಯರು ರೋಗಿಗಳಿಗೆ ನೆರವಾಗುತ್ತಿರುವುದು ಸಮಾಧಾನಕರ ಸಂಗತಿ.
'ವೈದ್ಯರ ಕೆಲಸ ಕೇವಲ ಉದ್ಯೋಗವಲ್ಲ, ಸರ್ಕಾರಿ ವೈದ್ಯರ ಕೆಲಸ ಸಾಮಾಜಿಕ ಸೇವೆಯಂತೆ. ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲು ಸೇವೆಯಿಂದ ದೂರ ಉಳಿದು ಪ್ರತಿಭಟನೆ ನಡೆಸೋದು ಸರಿಯಲ್ಲ. ರೋಗಿಗಳಿಗೆ ತೊಂದರೆ ನೀಡುವುದು ದೇಶ ದ್ರೋಹದ ಕೆಲಸ' ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ಹೇಳಿದ್ದಾರೆ.
ಶವಾಗಾರದಲ್ಲೇ ಉಳಿದ ಶವ; ಚಿಕ್ಕಮಗಳೂರಿನಲ್ಲಿ ವೈದ್ಯರ ಮುಷ್ಕರದಿಂದಾಗಿ ವೈದ್ಯರು ಶವ ಪರೀಕ್ಷೆ ಮಾಡದ ಶವಗಳು ಶವಾಗಾರದಲ್ಲೇ ಉಳಿದಿದ್ದವು. ಬೆಂಗಳೂರು, ಮಡಿಕೇರಿಯಲ್ಲೂ ಇದೇ ಪರಿಸ್ಥಿತಿ ಇದೆ. ಇದರಿಂದ ಮೃತರ ಸಂಬಂಧಿಗಳು ತಕ್ಷಣವೇ ಶವ ಪರೀಕ್ಷೆ ನಡೆಸಬೇಕೆಂದು ಪ್ರತಿಭಟನೆ ನಡೆಸಿದರು.
ಕಾರ್ಮಿಕ ಸಾವು: ವಿದ್ಯುತ್ ಶಾಕ್‌ನಿಂದ ತೀವ್ರವಾಗಿ ಗಾಯಗೊಂಡಿದ್ದ ಶಿಡ್ಲಘಟ್ಟ ಪಟ್ಟಣದ ನಲ್ಲಿಮರದ ನಿವಾಸಿ ವೆಂಕಟೇಶ್(30) ಅವರನ್ನು ಸರ್ಕಾರ ಆಸ್ಪತ್ರೆಗೆ ಚಿಕಿತ್ಸೆಗಾಗಿ ತರಲಾಯಿತು. ಆದರೆ, ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದರು. ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದ್ದರಿಂದ ಕಾರ್ಮಿಕ ಮೃತಪಟ್ಟನು. ಇದನ್ನು ಖಂಡಿಸಿ ಮೃತನ ಸಂಬಂಧಿಕರು ಕೆಲವು ಕಾಲ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
ಮಡಿಕೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರದಿಂದ ಎಲ್ಲಾ ಬಗೆ ಸೇವೆ ನೀಡದಿರಲು ವೈದ್ಯರು ನಿರ್ಧರಿಸಿದ್ದಾರೆ. ಬೆಳಗಾವಿ, ಬಾಗಲಕೋಟೆಯಲ್ಲಿ ಅಂಥ ತೊಂದರೆಗಳೇನೂ ಆಗಿಲ್ಲವಾದರೂ, ರೋಗಿಗಳು ತೀವ್ರ ಸಮಸ್ಯೆಯನ್ನು ಎದುರಿಸಿದರು. ಬಳ್ಳಾರಿ, ಕೊಪ್ಪಳ, ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಲ್ಲಿ ರೋಗಿಗಳು ಸಮಸ್ಯೆ ಎದುರಿಸಿದ್ದಾರೆ.
ಬೆಂಗಳೂರಿನ ಜಯನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಊಟ ಕೊಡುವುದನ್ನು ನಿಲ್ಲಿಸಲಾಗಿದೆ. ಮಲ್ಲೇಶ್ವರಂ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಶೌಚಾಲಯ ಸಮಸ್ಯೆ ಎದುರಾಗಿದೆ. ಹೊಸ ರೋಗಿಗಳನ್ನು ದಾಖಲಿಸಿಕೊಳ್ಳುವುದನ್ನು ನಿಲ್ಲಿಸಿದ್ದೇವೆ ಎಂದು ಕೆಸಿ ಜನರಲ್ ಆಸ್ಪತ್ರೆ ವೈದ್ಯಾಧಿಕಾರಿ ಆರ್ ಎಲ್ ಚನ್ನಬಸಪ್ಪ ಹೇಳಿದ್ದಾರೆ.
ಪ್ರತಿಭಟನೆ: ಆನಂದ್ ರಾವ್ ಸರ್ಕಲ್ ನಲ್ಲಿ ಭಾನುವಾರ ಸುಮಾರು 50 ಕ್ಕೂ ಹೆಚ್ಚು ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ. ಸುಮಾರು 10 ಜಿಲ್ಲೆಗಳ ಆಸ್ಪತ್ರೆಗಳನ್ನು ವೈದ್ಯಕೀಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬದಲಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಅಡಿಗೆ ತರಲು ನಿರ್ಧರಿಸಿರುವ ಸರ್ಕಾರದ ಕ್ರಮವನ್ನು ಆಸ್ಪತ್ರೆ ಸಿಬ್ಬಂದಿಗಳು ವಿರೋಧಿಸಿ ಪ್ರತಿಭಟನೆ, ಮುಷ್ಕರ ಹೂಡಿದ್ದಾರೆ.












Click it and Unblock the Notifications