ಚುನಾವಣೆ: ರೆಡ್ಡಿಗೆ ಬಿಡುಗಡೆ ಭಾಗ್ಯವಿಲ್ಲ, ಬಾಬುಗೂ ಕಂಟಕ

ಜಾಮೀನು ಕೋರಿ ಹೊರಬಂದು ಚುನಾವಣೆ ಪ್ರಚಾರದಲ್ಲಿ ಭಾಗವಹಿಸುವುದು ಮತ್ತು ಚುನಾವಣೆಗೆ ನಿಲ್ಲುವ ಬಗ್ಗೆಯೂ ಚಂಚಲಗೂಡ ಜೈಲಿನಿಂದಲೇ ಮಂತ್ರಾಲೋಚಿಸುತ್ತಿದ್ದ ಜನಾ ರೆಡ್ಡಿಗೆ ಜಾಮೀನು ಅತ್ಯಂತ ದುರ್ಲಭವಾಗುವ ಸಾಧ್ಯತೆಗಳು ಹೆಚ್ಚಾಗುತ್ತಿವೆ.
ರೆಡ್ಡಿಗೆ ಆತನ ಅತ್ಯಾಪ್ತ ಸಹಾಯಕ ಮೆಹಫೂಜ್ ಅಲಿ ಖಾನ್ ಸಮ ಮುಳುಗುನೀರು ತಂದಿಟ್ಟಿದ್ದಾನೆ. ಜನಾರ್ದನ ರೆಡ್ಡಿ ಗಣಿ ಅಕ್ರಮದಲ್ಲಿ ತನ್ನದು ಲವಲೇಶವೂ ಪಾತ್ರವಿಲ್ಲ. ತಾನು ಅಮಾಯಕ ಎಂದೇ ನಿರೂಪಿಸುತ್ತಾ ಬಂದಿದ್ದ ಅಲಿ ಖಾನ್ ವಿರುದ್ಧ ಹೈದರಾಬಾದ್ ಸಿಬಿಐನ ಕಿರಿಯ ಅಧಿಕಾರಿ ಎಂ ಆರ್ ಖಾನ್ ಖಡಕ್ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇದು ರೆಡ್ಡಿಯನ್ನು ನೇರವಾಗಿ ಅಪರಾಧಿ ಸ್ಥಾನಕ್ಕೆ ಕೊಂಡೊಯ್ಯುವಂತಹುದು.
ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹೀಗೆ 'ಹೆಚ್ಚುವರಿ' ಚಾರ್ಜ್ ಶೀಟ್ ಸಲ್ಲಿಸುವ ಕ್ರಮವನ್ನು ಜಾರಿಯಲ್ಲಿಟ್ಟಿರುವ ಸಿಬಿಐ, ರೆಡ್ಡಿಗೆ ಜಾಮೀನು ಸಿಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ.
ಅಷ್ಟೇ ಅಲ್ಲ. ಈಗ ಅಲಿ ಖಾನ್ ವಿರುದ್ಧ 'ಹೆಚ್ಚುವರಿ' ಚಾರ್ಜ್ ಶೀಟ್ ಸಲ್ಲಿಸಿದ್ದೂ ಅಲ್ಲದೆ, ಅದರಲ್ಲಿ ಅಲಿ ಖಾನನ ಇನ್ನೂ ಮೂರ್ನಾಲ್ಕು ಸ್ನೇಹಿತರನನ್ನು ಗುರುತಿಸಿ, ಅವರ ವಿಚಾರಣೆ ನಡೆಸಿ, ಅವರ ವಿರುದ್ಧವೂ ಚಾರ್ಜ್ ಶೀಟ್ ಸಲ್ಲಿಸಲು ಸಿಬಿಐ ರಣೋತ್ಸಾಹದಲ್ಲಿದೆ. ಹಾಗಾಗಿ, ರೆಡ್ಡಿಗೆ ಸದ್ಯಕ್ಕೆ ಬಿಡುಗಡೆಯ ಭಾಗ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಕುತೂಹಲಕಾರಿಯೆಂದರೆ ಮೆಹಫೂಜ್ ಅಲಿ ಖಾನ್ ಕಂಪ್ಲಿ ಶಾಸಕ ಸುರೇಶ ಬಾಬುಗೆ ಇಂಜಿನಿಯರಿಂಗ್ ಕ್ಲಾಸ್ ಮೇಟ್. ಹಾಗಾಗಿ ರೆಡ್ಡಿ- ಅಲಿ ಖಾನ್ ಮುಲಾಖಾತ್ ಗೆ ನೀರೆರೆದಿದ್ದೇ ಕಂಪ್ಲಿ ಸುರೇಶ್. ಹಾಗಾಗಿ ಚುನಾವಣೆ ಉತ್ಸಾಹದಲ್ಲಿರುವ ಸುರೇಶ ಬಾಬುವಿಗೂ ಈಗ ಸಿಬಿಐ ಕಾಟ ಶುರುವಾಗಿದೆ.












Click it and Unblock the Notifications