ಕಾವೇರಿಗಾಗಿ ಹೋರಾಡಬೇಕಾಗಿರುವ ರಾಜಕಾರಣಿಗಳು ಎಲ್ಲಿ?

ಸದ್ಯಕ್ಕೆ ಕೆಆರ್‌ಎಸ್‌ನಲ್ಲಿ ಇರುವುದು 2.9 ಟಿಎಂಸಿ ಬಳಕೆಯುಕ್ತವಾದ ನೀರು ಮಾತ್ರ. ಅದರಲ್ಲಿ 2.44 ಟಿಎಂಸಿ ನೀರು ಬಿಟ್ಟರೆ ಗೋವಿಂದ ಗೋವಿಂದ. ಇಂಥ ಸ್ಥಿತಿಯಲ್ಲಿ ಕರ್ನಾಟಕದ ಜನತೆ ಮಾತ್ರವಲ್ಲ ಎಲ್ಲ ರಾಜಕಾರಣಿಗಳು ಪಕ್ಷಭೇದ ಮರೆತು ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ. ಸರಕಾರ ನೆಗೆದುಬಿದ್ದರೂ ಸರಿ ತೊಟ್ಟು ನೀರನ್ನೂ ತಮಿಳುನಾಡಿಗೆ ಬಿಡುವುದಿಲ್ಲ ಎಂದು ಸರಕಾರ ಸೆಟೆದು ನಿಲ್ಲಬೇಕಾಗಿದೆ.
ಆದರೆ, ನಮ್ಮ ರಾಜಕಾರಣಿಗಳು ಒಗ್ಗಟ್ಟಾಗಿದ್ದಾರಾ? ಬುಧವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಇದ್ದದ್ದು ಬೆರಳೆಣಿಕೆಯ ನಾಯಕರು ಮಾತ್ರ. ಇದ್ದವರೂ ಯಾವುದೇ ನಿರ್ಧಾರವನ್ನು ತಳೆಯಲಾಗಲಿಲ್ಲ. ಗುರುವಾರ ಮಧ್ಯಾಹ್ನ 3 ಗಂಟೆಗೆ ಮತ್ತೊಂದು ಸರ್ವಪಕ್ಷಗಳ ಸಭೆ ಕರೆಯಲಾಗಿದೆ.
ಬಜೆಟೆ ಸೆಷನ್ ನಡೆಯುತ್ತಿರುವ ಸಂದರ್ಭದಲ್ಲಿ ಸದನದಲ್ಲಿ ಹಾಜರಿರಬೇಕಾಗಿದ್ದ ಅನೇಕ ಜನಪ್ರತಿತನಿಧಿಗಳು ಚೆಲ್ಲಾಪಿಲ್ಲಿಯಾಗಿದ್ದಾರೆ. ಕೆಲವರು ಬಿಜಾಪುರ ಸಾಹಿತ್ಯ ಸಮ್ಮೇಳನದ ನೆಪ ಮಾಡಿಕೊಂಡು ಉತ್ತರ ಕರ್ನಾಟಕಕ್ಕೆ ತೆರಳಿದ್ದರೆ, ಹಲವರು ಬೆಂಗಳೂರಿನ ಯಲಹಂಕಾದಲ್ಲಿ ಹಾರಾಡುತ್ತಿರುವ ಉಕ್ಕಿನ ಹಕ್ಕಿಗಳನ್ನು ನೋಡಲೆಂದು ಸಂಸಾರ ಸಮೇತ ಹೋಗಿದ್ದಾರೆ.
ಕಾವೇರಿ ವಿಷಯದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಯಡಿಯೂರಪ್ಪ ಮುನಿಸಿಕೊಂಡು ಮೈಸೂರಿನಲ್ಲಿ ಪಾದಯಾತ್ರೆ ಆರಂಭಿಸಿದ್ದಾರೆ. ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ಸರ್ವಪಕ್ಷ ಸಭೆ ನಡೆಸುವಾಗ ಕರ್ನಾಟಕ ಜನತಾ ಪಕ್ಷದ ನಾಯಕರಾರನ್ನೂ ಬಿಜೆಪಿ ಸರಕಾರ ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಶೋಭಾ ಕರಂದ್ಲಾಜೆ ಮೈಸೂರಿನಲ್ಲಿ ಬುಧವಾರ ಕೆಂಡ ಕಾರಿದ್ದರು.
ರಾಜಕಾರಣಿಗಳು ಹೀಗಿರುವಾಗ, ಕಾವೇರಿಗಾಗಿ ಹೋರಾಟಕ್ಕಾಗಿ ಇಳಿಯಬೇಕಾಗಿರುವುದು ಒನ್ಸ್ ಅಗೇನ್ ಮಂಡ್ಯ, ಮೈಸೂರು, ಚಾಮರಾಜನಗರದ ರೈತರು ಮತ್ತು ನಾಗರಿಕರೆ. ಅವರಿಗೆ ಕನ್ನಡಪರ ಸಂಘಟನೆಗಳು ಖಂಡಿತ ಕೈಜೋಡಿಸುತ್ತವೆ. ಸರಕಾರವೇ ಬಿದ್ದುಹೋಗಲಿ, ಸುಪ್ರೀಂಕೋರ್ಟಿನ ಆದೇಶವನ್ನು ಉಲ್ಲಂಘಿಸಿ ಜೈಲಿಗೆ ಹೋಗುವಂಥ ಪರಿಸ್ಥಿತಿಯೇ ಬರಲಿ ಹನಿ ನೀರನ್ನು ತಮಿಳುನಾಡಿಗೆ ಬಿಡಲು ಅವಕಾಶ ನೀಡುವುದಿಲ್ಲ, ಬೇಕಾದರೆ ಪ್ರಾಣ ಹೋದರೂ ಸರಿ ಎಂದು ರೈತರ ಮುಖಂಡ ನಂಜುಂಡೇ ಗೌಡ ಗರ್ಜಿಸಿದ್ದಾರೆ.












Click it and Unblock the Notifications