ಸೆಲ್ವಿ ಜಯಾದು ಅತಿರೇಕ, ಆದ್ರೂ ಇಂದೇನಾಗುವುದೋ?

ಈ ಮಧ್ಯೆ, 'ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಇತ್ತೀಚೆಗೆ ನೀರು ಕೇಳಿರುವುದು ಅತಿರೇಕದ್ದು' ಎಂದು ಜಲ ಆಯೋಗದ ತ್ರಿಸದಸ್ಯ ಸಮಿತಿ ನಿನ್ನೆ ಸುಪ್ರೀಂಕೋರ್ಟಿಗೆ ತನ್ನ ವರದಿ ಸಲ್ಲಿಸಿದೆ. ಇದರಿಂದ ಕಾವೇರಿ ಕೊಳದಲ್ಲಿ ಇದ್ದಬದ್ದ ನೀರೆಲ್ಲ ತನಗೇ ಬೇಕು ಎಂದು ರಚ್ಚೆ ಹಿಡಿಯುವ ಜಯಲಲಿತಾಗೆ ತೀವ್ರ ಹಿನ್ನಡೆಯಾಗಿದೆ.
ಸುಪ್ರೀಂಕೊರ್ಟ್ ಸೂಚನೆಯ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಫೆ. 5ರಂದು ಭೇಟಿ ನೀಡಿ ಕಾವೇರಿ ಕೊಳ್ಳದಲ್ಲಿ ನಡೆದಾಡಿದ ಸಮಿತಿಯ ಸದಸ್ಯರು
'ಮುಖ್ಯಮಂತ್ರಿ ಜಯಲಲಿತಾ ಕೇಳಿರುವಂತೆ ಆ ರಾಜ್ಯಕ್ಕೆ 9 ಟಿಎಂಸಿ ನೀರಿನ ಅಗತ್ಯವಿಲ್ಲ. ಸದ್ಯಕ್ಕೆ 2.44 ಟಿಎಂಸಿಯಷ್ಟೇ ನೀರು ಸಾಕು. ಜಯಲಲಿತಾ ಹೇಳಿರುವಂತೆ 6 ಲಕ್ಷ ಎಕರೆ ಪ್ರದೇಶಕ್ಕೆ ನೀರು ಬೇಕಿಲ್ಲ. ಕೇವಲ 1 ಲಕ್ಷ ಎಕರೆ ಕೃಷಿ ಪ್ರದೇಶಕ್ಕಷ್ಟೇ ನೀರು ಸಾಕು. ಉಳಿದ 5 ಲಕ್ಷ ಎಕರೆ ಕೃಷಿ ಪ್ರದೇಶದಲ್ಲಿ ಸಾಂಬಾ ಬೆಳೆಯ ಶೇ. 50ರಷ್ಟು ಕೊಯ್ಲು ಮುಗಿದಿದೆ. ಕರ್ನಾಟಕದಿಂದ ಕಾವೇರಿ ನೀರು ಹರಿಯದೆ ಸಾಂಬಾ ಬೆಳೆ ಹಾಳಾಗುತ್ತಿದೆ ಎಂಬ ತಮಿಳುನಾಡು ವಾದದಲ್ಲಿ ಹುರುಳಿಲ್ಲ' ಎಂದು ತಮ್ಮ ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಇದು ಜಯಲಲಿತಾಗೆ ಮುಳುವಾಗುವ ಸಂಭವವಿದ್ದರೆ ಕರ್ನಾಟಕಕ್ಕೆ ಆಶಾದಾಯಕ ಪರಿಸ್ಥಿತಿಯಿದೆ. ಆದರೂ ಕರ್ನಾಟಕ ನಿರಂತರವಾಗಿ ಜಲ ವ್ಯಾಜ್ಯದಲ್ಲಿ ಸೋಲುತ್ತಿರುವ ಪರಂಪರೆಯನ್ನು ನೋಡಿದರೆ ಇಂದೂ ಸುಪ್ರೀಂಕೋರ್ಟಿನಲ್ಲಿ ನಮಗೆ ಏನು ಕಾದಿದೆಯೋ ಎಂಬ ಆತಂಕ ಮನೆ ಮಾಡಿದೆ.
ಕರ್ನಾಟಕವೇನೋ ಆದದ್ದೆಲ್ಲಾ ಆಗಲಿ ಕಾವೇರಿ ಮಾತೆಯ ದಯೆಯೊಂದಿರಲಿ ಎಂಬಂತೆ ಇಂದು ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ಆಧರಿಸಿ, ಮುಂದಿನ ಕಾನೂನು ಹೋರಾಟ ನಡೆಸುವುದಾಗಿ ಹೇಳಿಕೊಂಡು ಮಗುಮ್ಮಾಗಿ ಕುಳಿತಿದೆ.
ತಮಿಳುನಾಡಿನ ತುರ್ತುಗಮನಕ್ಕೆ: ಕರ್ನಾಟಕದಲ್ಲಿ ಕಾವೇರಿ ನದಿಯ ಕೃಷ್ಣರಾಜ ಸಾಗರ, ಹಾರಂಗಿ, ಕಬಿನಿ, ಹೇಮಾವತಿ ಜಲಾಶಯಗಳಲ್ಲಿ ಒಟ್ಟು 23.85 ಟಿಎಂಸಿ ಅಡಿ ನೀರಿದೆ. ಇದರಲ್ಲಿ 10 ಟಿಎಂಸಿ ಅಡಿ (ಡೆಡ್ ಸ್ಟೋರೇಜ್) ಬಳಸಲು ಬರುವುದಿಲ್ಲ. ಬೆಂಗಳೂರು, ಮೈಸೂರು ಮತ್ತಿತರ ನಗರಗಳಿಗೆ ಪ್ರತಿ ತಿಂಗಳು 2.5 ಟಿಎಂಸಿ ಅಡಿಯಂತೆ ಮುಂಗಾರು ಆರಂಭ ವಾಗುವವರೆಗೂ ನೀರು ಒದಗಿಸಬೇಕಾದ ಮಹತ್ವದ ಹೊಣೆಗಾರಿಕೆ ಸರ್ಕಾರದ ಮೇಲಿದೆ.












Click it and Unblock the Notifications