ಕಾಟನ್ ಪೇಟೆಯಲ್ಲಿ ಯುವತಿ ಭೀಕರ ಮರ್ಡರ್

ಕಾಟನ್‌ಪೇಟೆ ಓಟಿಸಿ ರಸ್ತೆ ಯುಜಿ ರೀಗಲ್ ವಸತಿಗೃಹದ ಕೊಠಡಿ ಸಂಖ್ಯೆ 265 ರಲ್ಲಿ ಹೆಣವಾಗಿ ಮಲಗಿದ್ದ ರೂಪಾಲಿ ದೇಹವನ್ನು ಮನಸೋ ಇಚ್ಛೆ ಕೊಚ್ಚಿ ಹಾಕಲಾಗಿದೆ. ಬುಧವಾರ ಸಂಜೆ ವೇಳೆಗೆ ಸಾವಿನ ಬಗ್ಗೆ ತಿಳಿದು ಬಂದರೂ ಕೊಲೆ ನಡೆದು ಎರಡು ಮೂರು ದಿನಗಳು ನಡೆದಿರುವ ಶಂಕೆ ವ್ಯಕ್ತ ವಾಗಿದೆ.
ಉತ್ತರ ಪ್ರದೇಶ ಮೂಲದ ರೂಪಾಲಿ ಆಕ್ಸಿಸ್ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದು, ಕುಮಾರಸ್ವಾಮಿ ಬಡಾವಣೆಯ ಪಿಜಿಯಲ್ಲಿ ವಾಸವಾಗಿದ್ದಳು. ಫೆಬ್ರವರಿ 3ರಂದು ಸಂತೋಷಕುಮಾರ್ ಯಾದವ್ ಎಂಬ ವ್ಯಕ್ತಿಯ ಜೊತೆ ಬಂದು ರೂಪಾಲಿ ಸಂತೋಷಕುಮಾರ್ ಹೆಸರಿನಲ್ಲಿ ಕೋಣೆ ತೆಗೆದುಕೊಂಡಿದ್ದರು.
ಈ ವೇಳೆ ಗುರುತಿನ ಚೀಟಿ ನೀಡುವಂತೆ ಒತ್ತಾಯ ಮಾಡಿದ ವೇಳೆ ಯುವಕ ಸಂಜೆ ಕೊಡುತ್ತೇನೆ ಎಂದು ಮುಂದೆ ತಳ್ಳಿದ್ದಾನೆ. ಮತ್ತೆ ಸಂಜೆ ಈತ ಯುವಕ ವಸತಿಗೃಹದವರಿಗೆ ಏನೂ ಹೇಳದೇ ಕೊಠಡಿಗೆ ಹೊರಗಿನಿಂದ ಬೀಗ ಹಾಕಿಕೊಂಡು ಹೋಗಿದ್ದಾನೆ.
ಹೊರಗಡೆ ಹೋಗಿರುವರು ಬರುತ್ತಾರೆ ಎಂದು ವಸತಿಗೃಹದವರು ಸುಮ್ಮನೆ ಇದ್ದಾರೆ. ಆದರೆ, ಬುಧವಾರ ಮಧ್ಯಾಹ್ನ ರೂಮಿನಿಂದ ವಾಸನೆ ಬಂದ ಹಿನ್ನೆಲೆಯಲ್ಲಿ ನಕಲಿ ಕೀಲಿ ಬಳಸಿ ರೂಮನ್ನು ತೆಗೆದು ನೋಡಿದಾಗ ಯುವತಿ ಕೊಲೆಯಾದ್ದು ಗೊತ್ತಾಗಿದೆ. ಯುವತಿಯ ಕುತ್ತಿಗೆಯ ಎರಡೂ ಭಾಗಕ್ಕೆ ಇರಿಯಲಾಗಿದೆ. ಹೊಟ್ಟೆಗೆ ಇರಿದು ಕರಳು ಬಗೆಯಲಾಗಿದೆ. ಕೊನೆಗೆ ಯುವತಿಯ ಗುಪ್ತಾಂಗಕ್ಕೂ ಸಹ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಸುಮಾರು ಹತ್ತಾರು ಕಡೆ ಕೊಚ್ಚಿ ಹಾಕಲಾಗಿದೆ ಎಂದು ಕಾಟನ್ ಪೇಟೆ ಪೊಲೀಸರು ತಿಳಿಸಿದ್ದಾರೆ.
ಘಟನೆ ಬಗ್ಗೆ ತಿಳಿದು ಸ್ಥಳಕ್ಕೆ ಬಂದ ಪೊಲೀಸರಿಗೆ ಸಂತೋಷ್ ಕುಮಾರ್ ನೀಡಿರುವ ವಿಳಾಸ ನಕಲಿ ಎಂದು ತಕ್ಷಣವೇ ತಿಳಿದು ಬಂದಿದೆ. ಸುಮಾರು 10 ಕಡೆ ಇರಿತ, ಕೊಲೆಗೂ ಮುನ್ನ ಬಲವಂತವಾಗಿ ಅತ್ಯಾಚಾರ ಎಸಗಿರುವ ಶಂಕೆಯೂ ವ್ಯಕ್ತವಾಗಿದೆ. ಮೃತದೇಹವನ್ನು ಲಾಡ್ಜಿನಿಂದ ಹೊರಗೆ ಸಾಗಿಸಲಾಗದಷ್ಟು ಕೊಳತೆ ಹೋಗಿದ್ದರಿಂದ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ಪರೀಕ್ಷೆ ನಡೆಸಬೇಕಾಯಿತು.
ಬಹುಶಃ ಫೆ.3 ರಂದೇ ಕೊಲೆ ನಡೆಸಲಾಗಿದ್ದು, ಸಂತೋಷ್ ಕುಮಾರ್ ಕಾಟನ್ ಪೇಟೆಯಿಂದ ಕಲಾಸಿಪಾಳ್ಯದ ಗಲ್ಲಿಯೊಂದರಲ್ಲಿರುವ ಲಾಡ್ಜ್ ನಲ್ಲಿ ತಂಗಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಕಲಾಸಿಪಾಳ್ಯದಲ್ಲಿ ಉಳಿದುಕೊಂಡಿದ್ದ ಸಂತೋಷ್ ಅಲ್ಲಿ ಕೊಲೆಗೆ ಬಳಸಿದ ಚಾಕು ಹಾಗೂ ಕರವಸ್ತ್ರವನ್ನು ಮರೆತು ಹೋಗಿದ್ದಾನೆ. ಕಾಟನ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.












Click it and Unblock the Notifications