ಈಗಿನ ಆಡಳಿತ ಸಾಕಾಗಿದೆ; ಬದಲಾವಣೆ ಬೇಕೇ ಬೇಕು

'ವೃತ್ತಿಪರ' ರಾಜ್ಯದ ಕನಸು ಕಾಣುತ್ತಿದ್ದ ಕಾರ್ಪೊರೇಟ್ ವಲಯಕ್ಕೂ ಇದರಿಂದ ಭ್ರಮನಿರಸನವಾಗಿದೆ. ಇಲ್ಲಿ ಪ್ರತಿಯೊಂದಕ್ಕೂ ಲಂಚ ಲಂಚ. ನಮಗಂತೂ ಸಾಕಾಗಿದೆ ಎನ್ನುತ್ತಾರೆ ಇನ್ಪೋಸಿಸ್ ಕಂಪನಿ ಹಿಂದಿನ ಮಾನವ ಸಂಪನ್ಮೂಲ ಮುಖ್ಯಸ್ಥ ಟಿವಿ ಮೋಹನದಾಸ್ ಪೈ.
ಮೈನಿಂಗ್ ಮಾಫಿಯಾ, ಲ್ಯಾಂಡ್ ಮಾಫಿಯಾ, ಗಾರ್ಬೇಜ್ ಮಾಫಿಯಾ ಹೀಗೆ ಒಂದೇ ಎರಡೇ ... ಮಾಫಿಯಾ ಮಾಫಿಯಾ. ಇವುಗಳ ಅಧಿಪತಿಯಾಗಿ ಭ್ರಷ್ಟ ಅಧಿಕಾರಿಗಳು, ನೀತಿಗೆಟ್ಟ ರಾಜಕಾರಣಗಳು. ಇದರಿಂದ ರೋಸಿಹೋಗಿದ್ದೇವೆ ಎಂಬುದು ಬಹಳಷ್ಟು ಕಾರ್ಪೊರೇಟ್ ಕಂಪನಿಗಳ ಮುಖ್ಯಸ್ಥರ ಮನದಾಳದ ನೋವು.
ಈಗ ಬದಲಾವಣೆಯ ಕಾಲ ಬಂದಿದೆ. ಪಕ್ಷ ಯಾವುದೇ ಆಗಲಿ. ಜಡ್ಡುಗಟ್ಟಿದ ನಮ್ಮ ದೈನಂದಿನ ಬದುಕಿನಲ್ಲಿ ಮಹತ್ತರ ಬದಲಾವಣೆಗಳು ಕಂಡುಬರಲಿ ಎಂದು ಕಾರ್ಪೊರೇಟ್ ಜನರಷ್ಟೇ ಅಲ್ಲ ಬಹುತೇಕ ಎಲ್ಲರೂ ಬಯಸಿದ್ದಾರೆ.
'ಇತ್ತೀಚೆಗೆ ಭ್ರಷ್ಟಾಚಾರವನ್ನು ಅಸಹಾಯಕರಾಗಿ, ಅನಿವಾರ್ಯವಾಗಿ ಸಹಿಸಿಕೊಂಡು ಬಂದಿದ್ದೇವೆ. ಇಡೀ ವ್ಯವಸ್ಥೆಯೇ ಗಬ್ಬುನಾರುತ್ತಿದೆ. ಆದ್ದರಿಂದ ನಾವೊಂದಿಷ್ಟು ಬದಲಾವಣೆ ಬಯಸುತ್ತಿದ್ದೇವೆ' ಎಂದು ಬಯೋಕಾನ್ ಕಂಪನಿಯ ಕಿರಣ್ ಮಜುಂದಾರ್ ಷಾ ಅಭಿಪ್ರಾಯಪಡುತ್ತಾರೆ.
ಈ ಹಿಂದೆ ಕರ್ನಾಟಕ ಅಂದರೆ ಜನ ನಮ್ಮತ್ತ ಹೆಮ್ಮೆಯಿಂದ ನೋಡುತ್ತಿದ್ದರು. ಹೊಸ ಆರ್ಥಿಕ ಶಕ್ತಿ ಎಂದು ಪರಿಗಣಿಸುತ್ತಿದ್ದರು. ಮಾಹಿತಿ ತಂತ್ರಜ್ಞಾನ ಮತ್ತು ಬಯೋ ಟೆಕ್ನಾಲಜಿಗೆ ಕರ್ನಾಟಕ ಹೆಸರುವಾಸಿಯಾಗಿತ್ತು. ಇವತ್ತು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ರಾಜಕೀಯವಾಗಿ ಕರ್ನಾಟಕ ಅಧೋಗತಿಗಿಳಿದಿದೆ ಎನ್ನುತ್ತಾರೆ ಕಾರ್ಪೊರೇಟ್ ಮಂದಿ.
ಒಟ್ಟಾರೆಯಾಗಿ ಕರ್ಮಾಟಕದ ಇಮೇಜಿಗೆ ಡ್ಯಾಮೇಜಾಗಿದೆ. ಭ್ರಷ್ಟ ವ್ಯವಸ್ಥೆಗೆ ಮೇಜರ್ ಸರ್ಜರಿ ಆಗಬೇಕಾಗಿದೆ. ಹೊಸ ಆಡಳಿತಕ್ಕಾಗಿ ಹಾತೊರೆಯುತ್ತಿದ್ದೇವೆ, ತಹತಹಿಸುತ್ತಿದ್ದೇವೆ ಎಂದು ಗುಡುಗುತ್ತಾರೆ ಮೋಹನದಾಸ್ ಪೈ.
'ಅಸಮರ್ಥ, ಅದಕ್ಷ, ಬದ್ಧತೆಯಿಲ್ಲದ ಆಡಳಿತವನ್ನು ಕಾಣುತ್ತಿದ್ದೇವೆ. ಎಲ್ಲರಿಗೂ ಅಧಿಕಾರದ ದಾಹ, ಬೇಜವಾಬ್ದಾರಿ ಜನ' ಎಂದು ಕಿಡಿಕಿಡಿಯಾಗುತ್ತಾರೆ ಕಿರಣ್ ಮಜುಂದಾರ್ ಷಾ. 'ಅತ್ಯುತ್ತಮ ಆಡಳಿತವಿರಲಿ. ಆದರೆ ಸರಕಾರದ ಹಸ್ತಕ್ಷೇಪ ಕಡಿಮೆಯಿರಲಿ. ಇದಕ್ಕೆಲ್ಲ ನಾಗರಿಕರು ಎಚ್ಚೆತ್ತು ಸಕ್ರಿಯರಾಗಬೇಕಾದ ಅನಿವಾರ್ಯತೆಯಿದೆ. ನಾವೆಲ್ಲ ಒಂದಾಗಬೇಕಿದೆ. ಕೆಟ್ಟ ರಾಜಕಾರಣಿಗಳನ್ನು ಗುರುತಿಸಿ, ಸಾರ್ವಜನಿಕವಾಗಿ ಅವರಿಗೆ ಛೀಮಾರಿ ಹಾಕಬೇಕಿದೆ' ಎನ್ನುತ್ತಾರೆ ಷಾ. (ಕೃಪೆ)












Click it and Unblock the Notifications