ಯಡಿಯೂರಪ್ಪಗೆ ಹೈಕೋರ್ಟಿನಲ್ಲಿ ತಾತ್ಕಾಲಿಕ ಜಯ

ಯಡಿಯೂರಪ್ಪ ಮತ್ತು ರಾಘವೇಂದ್ರ ವಿರುದ್ಧ ಬೆಂಗಳೂರು ಲೋಕಾಯುಕ್ತ ನ್ಯಾಯಾಲಯದಲ್ಲಿ ದಾಖಲಾಗಿದ್ದ ಖಾಸಗಿ ದೂರಿನ ವಿಚಾರಣೆಯನ್ನು ಹೈಕೋರ್ಟ್ ಮಂಗಳವಾರ ರದ್ದು ಪಡಿಸಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹುಣಸೇಕಟ್ಟೆಯಲ್ಲಿ 69 ಎಕರೆ ಕೃಷಿ ಭೂಮಿಯನ್ನು ಕಬಳಿಸಿದ್ದಾರೆ ಎಂಬ ಆರೋಪ ಇಬ್ಬರ ವಿರುದ್ಧ ದಾಖಲಾಗಿತ್ತು.
ಆದರೆ, ಇದೇ ದೂರನ್ನು ಶಿವಮೊಗ್ಗದ ಲೋಕಾಯುಕ್ತ ನ್ಯಾಯಾಲಯದಲ್ಲಿ ಹೊಸದಾಗಿ ದಾಖಲಿಸಲು ಖಾಸಗಿ ದೂರುದಾರ ಬಿ ವಿನೋದ್ ಅವರಿಗೆ ಕೋರ್ಟ್ ಅನುಮತಿ ನೀಡಿದೆ.
ಲೋಕಾಯುಕ್ತ ನ್ಯಾಯಾಲಯದಲ್ಲಿ ತಮ್ಮ ವಿರುದ್ಧದ ದಾಖಲಾಗಿದ್ದ ದೂರು ರದ್ದು ಕೋರಿ ಯಡಿಯೂರಪ್ಪ ಮತ್ತವರ ಪುತ್ರ ರಾಘವೇಂದ್ರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆಎನ್ ಕೇಶವ ನಾರಾಯಣ ಅವರು, ಶಿವಮೊಗ್ಗದ ಜಿಲ್ಲೆಯಲ್ಲಿ ಜಮೀನು ಕಬಳಿಕೆ ಮಾಡಿ, ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಹಾಗೆಯೇ, ಹಣ ವರ್ಗಾವಣೆ ಎಲ್ಲವೂ ಶಿವಮೊಗ್ಗದಲ್ಲಿ ನಡೆದಿವೆ ಎಂದು ಆರೋಪಿಸಲಾಗಿದೆ.
ಆದ್ದರಿಂದ ಪ್ರಕರಣವನ್ನು ಅಲ್ಲಿನ ಸ್ಥಳೀಯ ಲೋಕಾಯುಕ್ತ ನ್ಯಾಯಾಲಯ ದಾಖಲಿಸಬೇಕು. ಬೆಂಗಳೂರು ಲೋಕಾಯುಕ್ತ ನ್ಯಾಯಾಲಯದಲ್ಲಿ ದಾಖಲಿಸಲು ಬರುವುದಿಲ್ಲ ಮತ್ತು ಆ ದೂರನ್ನು ವಿಚಾರಣೆ ನಡೆಸುವ ವ್ಯಾಪ್ತಿಯು ಬೆಂಗಳೂರು ಲೋಕಾಯುಕ್ತ ನ್ಯಾಯಾಲಯಕ್ಕೆ ಬರುವುದಿಲ್ಲ ಎಂದು ನ್ಯಾಯಧೀಶರು ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಕರಣವೇನು?: ಮಾಜಿ ಸಿಎಂ ಯಡಿಯೂರಪ್ಪ ಮತ್ತವರ ಪುತ್ರ ರಾಘವೇಂದ್ರ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹುಣಸೇಕಟ್ಟೆಯಲ್ಲಿ ಭದ್ರಾ ಹುಲಿ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ 69 ಎಕರೆ ಕೃಷಿಯ ಭೂಮಿಯನ್ನು ಬೇನಾಮಿ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ದಾಖಲಿಸಿ ಸೃಷ್ಟಿಸಿ ಕಬಳಿಸಿದ್ದಾರೆ. ನಂತರ ಆ ಭೂಮಿಯನ್ನು ಕೋಟ್ಯಾಂತರ ರೂ. ಗಳಿಗೆ ಮಾರಾಟ ಮಾಡಿದ್ದಾರೆ ಎಂದು ವಕೀಲ ವಿನೋದ್ ಬೆಂಗಳೂರಿನ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
ಲೋಕಾಯುಕ್ತ ನ್ಯಾ ಎನ್ ಕೆ ಸುಧೀಂದ್ರರಾವ್ ಅವರು ಯಡಿಯೂರಪ್ಪ, ರಾಘವೇಂದ್ರ ಸೇರಿದಂತೆ ಐದು ಜನರ ಮೇಲೆ ಸಿಆರ್ ಪಿಸಿ ಸೆಕ್ಷನ್ 202ರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಜುಲೈ 24ರಂದು ಆದೇಶ ನೀಡಿದ್ದರು.












Click it and Unblock the Notifications