ಕಾಂಗ್ರೆಸ್ ಪಾದಯಾತ್ರೆ ಗಾಂಧಿ ದಂಡಿಯಾತ್ರೆಯಂತೆಯೇ

ಇಂದು ರಾಜ್ಯ ಕಾಂಗ್ರೆಸ್ ನೇತೃತ್ವದಲ್ಲಿ ಕಾಂಗ್ರೆಸ್ ನಡಿಗೆ - ಸಾಮರಸ್ಯದ ಕಡೆಗೆ ಎಂಬ ಪಾದಯಾತ್ರೆ ಸಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ದಂಡಿಯಾತ್ರೆ ಮತ್ತು ಪಕ್ಷದ ಪಾದಯಾತ್ರೆಯನ್ನು ಒಂದಕ್ಕೊಂದು ಹೋಲಿಕೆ ಮಾಡಿಕೊಂಡಿದ್ದಾರೆ.
ಪಾದಯಾತ್ರೆಯ ಸಂದರ್ಭದಲ್ಲಿ ಬುಧವಾರ (ಜ 30) ರಾಷ್ಟ್ರಪಿತನಿಗೆ ಶ್ರದ್ದಾಂಜಲಿ ಸಲ್ಲಿಸಿ ಮಾತನಾಡುತ್ತಿದ್ದ ಪೂಜಾರಿ, ದೇಶವನ್ನು ರಕ್ಷಿಸುತ್ತಿರುವ ಸೈನಿಕರು ಮತ್ತು ನಮಗೆ ರಕ್ಷಣೆ ನೀಡುತ್ತಿರುವ ಪೊಲೀಸರಿಗೆ ಇನ್ನೂ ಹೆಚ್ಚಿನ ಸೌಲಭ್ಯ ಸಿಗಬೇಕೆಂದು ಅಭಿಪ್ರಾಯಪಟ್ಟರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಉಡುಪಿ ಜಿಲ್ಲಾ ಕಾಂಗ್ರೆಸ್ ಆಶ್ರಯದಲ್ಲಿ ಉಳ್ಳಾಲ - ಮಲ್ಪೆ ಕಾಂಗ್ರೆಸ್ ಪಾದಯಾತ್ರೆಯ ಎರಡನೆಯ ದಿನವಾದ ಬುಧವಾರ ಸಾರ್ವಜನಿಕ ಸಭೆಯನು ಉದ್ದೇಶಿಸಿ ಮಾತನಾಡುತ್ತಿದ್ದ ಪೂಜಾರಿ, ದೇಶದ ರಕ್ಷಣೆಗೆ ಕಾಂಗ್ರೆಸ್ ಪಕ್ಷ ಸದಾ ಸಿದ್ದವಾಗಿದೆ ಎಂದಿದ್ದಾರೆ.
ಕರಾವಳಿಯ ಜಿಲ್ಲೆಗಳ ಅಭಿವೃದ್ದಿಗೆ ಕಾಂಗ್ರೆಸ್ ಕೊಡುಗೆ ಅಪಾರ. ರಾಜ್ಯದ ಬಿಜೆಪಿ ಸರಕಾರ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಕಳೆದುಕೊಂಡಿದೆ. ಈ ಕೂಡಲೇ ಜಗದೀಶ್ ಶೆಟ್ಟರ್ ರಾಜೀನಾಮೆ ನೀಡಿ ವಿಧಾನಸಭೆ ವಿಸರ್ಜಿಸಲಿ ಎಂದು ಕೆಪಿಸಿಸಿ ಅದ್ಯಕ್ಷ ಡಾ. ಪರಮೇಶ್ವರ್ ಆಗ್ರಹಿಸಿದ್ದಾರೆ.
ನಾವೆಲ್ಲರೂ ಕಾಂಗ್ರೆಸ್ ಆದರ್ಶ ಪಾಲಿಸಬೇಕು. ಪಾದಯಾತ್ರೆಗೆ ಜನರಿಂದ ಸಿಗುತ್ತಿರುವ ಪ್ರತಿಕ್ರಿಯೆಗೆ ಆಭಾರಿಯಾಗಿದ್ದೇವೆ. ದೇಶ ಮತ್ತು ರಾಜ್ಯದ ಏಳಿಗೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಎಸ್ ಎಂ ಕೃಷ್ಣ ಇನ್ ನ್ಯೂ ಡೆಲ್ಲಿ : ಮಾಜಿ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ತುರ್ತು ಬುಲಾವ್ ನೀಡಿದೆ.
ಈ ಹಿನೆಲೆಯಲ್ಲಿ ಬುಧವಾರ ಬೆಳಗ್ಗೆ ದೆಹಲಿಗೆ ತೆರಳಿರುವ ಕೃಷ್ಣ, ಗುರುವಾರ ನಡೆಯಲಿರುವ ಎಐಸಿಸಿ ಪದಾಧಿಕಾರಿಗಳ ಸಭೆ ಹಾಗೂ ಮಹತ್ವದ ಸಿಡಬ್ಲ್ಯೂಸಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನೂ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications