ಏಪ್ರಿಲ್ 24, 29 ರಂದು ರಾಜ್ಯ ವಿಧಾನಸಭೆ ಚುನಾವಣೆ?

ಕೆಜೆಪಿ ಬೆಂಬಲಿತ ಶಾಸಕರ ರಾಜೀನಾಮೆ ಬೆದರಿಕೆ, ಜಗದೀಶ್ ಶೆಟ್ಟರ್ ಸರ್ಕಾರದ ಬಜೆಟ್ ಚಿಂತನೆ ನಡುವೆ ಉಂಟಾಗಿರುವ ರಾಜಕೀಯ ಏರುಪೇರುಗಳನ್ನು ಗಮನಿಸುತ್ತಿರುವ ರಾಜ್ಯ ಚುನಾವಣಾ ಆಯೋಗ ಸದ್ದಿಲ್ಲದೆ ಚುನಾವಣೆ ಸಿದ್ಧತೆ ನಡೆಸಿದೆ ಎಂಬ ಸುದ್ದಿ ಹೊರ ಬಿದ್ದಿದೆ.
ಏಪ್ರಿಲ್ 24, 29 ರಂದು ಎರಡು ಹಂತಗಳಲ್ಲಿ ಮತದಾನ ನಡೆಯುವುದು ಬಹುತೇಕ ಖಚಿತವಾಗಿದೆ. ರಾಜ್ಯ ಚುನಾವಣಾ ಆಯೋಗದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಟಿ.ಎಸ್.ನಿರಂಜನ್ ಅವರ ನೇತೃತ್ವದ ನಿಯೋಗ ದೆಹಲಿಗೆ ತೆರಳಿದ್ದು ಮುಖ್ಯ ಚುನಾವಣಾ ಆಯೋಗದ ಮುಖ್ಯ ಆಯುಕ್ತರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಬಿಜೆಪಿ ಸರ್ಕಾರ ಅವಧಿ ಪೂರ್ಣಗೊಳಿಸಿದರೂ ಇನ್ನು 118 ದಿನಗಳೊಳಗೆ ಚುನಾವಣೆ ನಡೆಯಬೇಕು. ಈ ಮಧ್ಯೆ ಕೆಜೆಪಿಯ ಮೇಲಾಟದಿಂದ ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರ ಬಿದ್ದರೆ, ಅವಧಿಗೂ ಮುನ್ನ ಚುನಾವಣೆ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.
ಈ ಎಲ್ಲ ಸಾಂದರ್ಭಿಕ ಅಂಶಗಳನ್ನು ಪರಿಗಣಿಸಿರುವ ಚುನಾವಣಾ ಆಯೋಗ ಫೆಬ್ರವರಿ 2ನೇ ವಾರದಲ್ಲಿ ಅಧಿಸೂಚನೆಯನ್ನು ಪ್ರಕಟಿಸಿ ಏ.24 ಹಾಗೂ 29ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಸಲು ಸಿದ್ಧತೆ ಕೈಗೊಂಡಿದೆ.
ಸಿದ್ಧತೆ ಆರಂಭಗೊಂಡಿದೆ: ಚುನಾವಣಾ ಆಯೋಗದ ವೆಬ್ ಸೈಟಿನಲ್ಲಿ ಮತದಾರರ ಕರಡು ಪ್ರತಿಯನ್ನು ಪ್ರಕಟಿಸಲಾಗಿದೆ. ಜ.25ರವರೆಗೆ ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿದೆ. ಮತದಾರರ ಪಟ್ಟಿಯನ್ನು ಈ ತಿಂಗಳಾಂತ್ಯದಲ್ಲಿ ಅಂತಿಮಗೊಳಿಸಿ ಪ್ರಕಟಿಸುವ ಸಾಧ್ಯತೆಯಿದೆ.
224 ಕ್ಷೇತ್ರಗಳನ್ನು ಎರಡು ಭಾಗಗಳಾಗಿ ವಿಂಗಡಿಸಿ ಚುನಾವಣೆ ನಡೆಸುವುದರಿಂದ ಅಗತ್ಯದಷ್ಟು ಇಎಮ್‌ಐ(ಮತ ಯಂತ್ರಗಳು)ಗಳ ಪೂರೈಕೆಗೆ ಈಗಾಗಲೇ ಆದೇಶ ನೀಡಲಾಗಿದೆ. ಹಿರಿಯ ಅಧಿಕಾರಿಗಳಿಗೆ ತರಬೇತಿ ನೀಡಲು ಪಟ್ಟಿ ಸಿದ್ಧಪಡಿಸಲಾಗಿದ್ದು ಫೆಬ್ರವರಿ ಮೊದಲ ವಾರದಲ್ಲೇ ಎ ಮತ್ತು ಬಿ ಶ್ರೇಣಿಯ ಅಧಿಕಾರಿಗಳಿಗೆ ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿದೆ.
ನಂತರ ಸಿ ಮತ್ತು ಡಿ ದರ್ಜೆಯ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತದೆ ಎಂದು ಮೂಲಗಳು ಖಚಿತಪಡಿಸಿವೆ. ತಾಂತ್ರಿಕವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಹೊರತುಪಡಿಸಿ ಇನ್ಯಾವುದೇ ತೊಂದರೆಗಳಿಲ್ಲದಿರುವುದರಿಂದ ಚುನಾವಣೆಗೆ ಅಡ್ಡಿ ಅಡಚಣೆಗಳಿಲ್ಲ ಎನ್ನಲಾಗಿದೆ.
ಜಗದೀಶ್ ಶೆಟ್ಟರ್ ಅವರ ಸರ್ಕಾರ ಅವಧಿ ಪೂಣಗೊಳಿಸಬೇಕು ಎಂದು ಒತ್ತಾಯಿಸುತ್ತಿರುವ ಬಿಜೆಪಿ ಏಪ್ರಿಲ್‌ನಲ್ಲಿ ಚುನಾವಣೆ ನಡೆಸಲು ತಾತ್ವಿಕ ಸಹಮತ ನೀಡಿದೆ. ಅವಧಿ ಪೂರ್ಣಗೊಳಿಸುವುದಕ್ಕಿಂತ ಬಜೆಟ್ ಮಂಡನೆ ಮುಖ್ಯವಾಗಿದೆ ಎಂಬ ಸುಳಿವು ಸಿಕ್ಕಿದೆ.
ಇನ್ನು ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಹಾಲಿ ಸರ್ಕಾರ ಕೂಡಲೇ ಉಚ್ಚಾಟನೆಗೊಂಡು ತಕ್ಷಣವೇ ಚುನಾವಣೆ ನಡೆಯಬೇಕು ಎಂದು ಒತ್ತಾಯಿಸುತ್ತಿವೆ. ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಕೂಡ ಚುನಾವಣೆ ಎದುರಿಸಲು ತುದಿಗಾಲಿನಲ್ಲಿ ನಿಂತಿದೆ. ಒಟ್ಟಾರೆ ಅವಧಿಗೆ ಮುನ್ನ ಚುನಾವಣೆ ಎದುರಾದರೆ ಯಾರೂ ಅಚ್ಚರಿಪಡಬೇಕಿಲ್ಲ.












Click it and Unblock the Notifications